ಸ್ವಚ್ಛತಾ ಕಾರ್ಯಕ್ರಮ
ಹೊಳೆಆಲೂರ: ಕಳೆದ ಹಲವಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮೀಪದ ಮೆಣಸಗಿ ಗ್ರಾಮದ ಐತಿಹಾಸಿಕ ದೇವಾಲಯಗಳ ಸ್ವಚ್ಛತಾ ಕಾರ್ಯ ಮತ್ತು ಸಂರಕ್ಷಣೆ ಕುರಿತ ಮಾಹಿತಿ ಕಾರ್ಯಕ್ರಮ ಈಚೆಗೆ ಹೊಳೆಆಲೂರಿನ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆಯಿತು. ಪರಂಪರಾಕೂಟ ಮತ್ತು ಎನ್.ಎಸ್.ಎಸ್ ಸಹಯೋಗದಲ್ಲಿ ಮಹಾವಿದ್ಯಾಲಯದ 35 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ, ಐತಿಹಾಸಿಕ ದೇವಾಲಯಗಳ ವಾಸ್ತು ಶಿಲ್ಪಗಳ ಕುರಿತು ಮಾಹಿತಿ ಪಡೆದರಲ್ಲದೇ ದೇವಾಲಯಗಳ ಸುತ್ತಮುತ್ತಲಿನ ಮುಳ್ಳು ಕಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಪರಂಪರಾ ಕೂಟದ ಸಂಚಾಲಕ ಕಡಪಟ್ಟಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದ್ದು, ಮುಂದಿನ ಪೀಳಿಗೆಗೆ ಕಲೆ, ಸಂಸ್ಕೃತಿಯನ್ನು ಉಳಿಸಿ ಕೊಡಬೇಕಾಗಿದೆ. ಮುಳ್ಳು ಕಂಟಿಗಳಿಂದ, ಮಳೆ, ಇತ್ಯಾದಿಗಳಿಂದಾಗಿ ದೇವಾಲಯಗಳು ಹಾಳಾಗಿ ಹೋಗುತ್ತಿದ್ದು, ಗ್ರಾಮದ ಸರ್ವರೂ ಇವುಗಳ ಬಗ್ಗೆ ಕಾಳಜಿ ವಹಿಸಬೇಕು. ನಮ್ಮೂರಿನ ಹಳೆಯ ದೇವಾಲಯ, ಸ್ಮಾರಕಗಳ ರಕ್ಷಣೆಗೆ ನಾವು ಬದ್ಧರಾಗಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಶಾರದಾ ಬಸವರಾಜ ಅಂಗಡಿ, ಪರಂಪರಾ ಕೂಟದ ಕಾರ್ಯದರ್ಶಿ ಡಾ. ಪ್ರಭು ಗಂಜಿಹಾಳ, ಅಧ್ಯಕ್ಷ ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಬಸವರಾಜ ಬೆಳವಟಗಿ ಸೇರಿದಂತೆ ಕರ್ನಾಟಕ ಯುವಕ ಮಂಡಳ, ಕಲ್ಮೇಶ್ವರ ಜೀರ್ಣೋದ್ಧಾರ ಸಮಿತಿ ಮಂಡಳಿಯವರು ಉಪಸ್ಥಿತರಿದ್ದರು.