ಹೊಸ ಆವಿಷ್ಕಾರಕ್ಕೆ ವಿದ್ಯಾರ್ಥಿಗಳು ಮುಂದಾಗಲಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 25
ಪ್ರತಿನಿತ್ಯ ಹೊಸ ಹೊಸ ತಂತ್ರಜ್ಞಾನ ಹೊಂದಿದ ವಸ್ತುಗಳು ಮಾರುಕಟ್ಟೆಗೆ ಧಾವಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಕ್ಕೆ ಪೇಟೆಂಟ್ ಪಡೆಯುವುದು ಅವಶ್ಯ. ಇದರಿಂದ ದೇಶ, ನಮ್ಮ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾನುವಾರ ಸಂಜೆ ನಡೆದ 3 ದಿನಗಳ ರಾಜ್ಯ ಮಟ್ಟದ ತಾಂತ್ರಿಕ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಕರ ಕೊರತೆ ಕಂಡುಬರುತ್ತಿದೆ. ಅದಕ್ಕಾಗಿ ನಮ್ಮ ದೇಶದ ಪ್ರತಿಭಾವಂತರಿಗೆ ಹಾಗೂ ಯುವಕರಿಗೆ ತಂತ್ರಜ್ಞಾನದ ಕೌಶಲ್ಯ ಕಲಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿ, ದೇಶದ ಪ್ರಗತಿಗೆ ಪೂರಕವಾಗುವಂತೆ ಬಳಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದಾಗಬೇಕು ಎಂದು ಹೇಳಿದರು. ನಮ್ಮ ದೇಶದಲ್ಲಿ ಶೇ. 70ರಷ್ಟು ಜನರು 35 ವರ್ಷದ ಒಳಗಿನ ಯುವಕರಾಗಿದ್ದು, ಅವರಲ್ಲಿ ತಾಂತ್ರಿಕ ಕೌಶಲ್ಯವನ್ನು ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರು. 1 ಸಾವಿರ ಕೋಟಿ ಮೀಸಲಿಟ್ಟಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ. ಜಗತ್ತಿನ ಹಲವು ಸಣ್ಣ ರಾಷ್ಟ್ರಗಳು ತಾಂತ್ರಿಕವಾಗಿ ಅಗಾಧ ಪ್ರಗತಿ ಸಾಧಿಸಿವೆ. ಥೈಲ್ಯಾಂಡ್.ನಂತ ಚಿಕ್ಕ ರಾಷ್ಟ್ರ ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿದೆ. ನಮಗೆ ಸಿಗುವ ಮಾಹಿತಿ ಮತ್ತು ನಮ್ಮ ಬುದ್ಧಿಶಕ್ತಿಯನ್ನು ಸಮೀಕರಣಗೊಳಿಸಿ ಹೊಸ ವಸ್ತುಗಳ ಆವಿಷ್ಕಾರಕ್ಕೆ ನಮ್ಮ ತಾಂತ್ರಿಕ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ ಮಾತನಾಡಿ, ಭಾರತ ಹಲವು ರಂಗಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ನಮ್ಮ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಜನ ಸಾಮಾನ್ಯರಿಗೆ ತಲುಪಬೇಕು. ನಮ್ಮ ದೇಶದ ಪ್ರತಿಭಾವಂತರು ಅಮೆರಿಕದಂತಹ ದೇಶಗಳಿಗೆ ಹೋಗದೆ, ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಮಾಜಿ ಶಾಸಕ ಎಸ್.ಎನ್. ಪಾಟೀಲ್, ಸಂಸ್ಥೆಯ ಅಧ್ಯಕ್ಷ ಬಸವರಾಜ ನೆಲವಿಗಿ ಮಾತನಾಡಿದರು. ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಬೇರೆ ಬೇರೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು. ರಾಜ್ಯ ಮಟ್ಟದ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 86 ತಾಂತ್ರಿಕ ಕಾಲೇಜಿನ 300ಕ್ಕೂ ಹೆಚ್ಚು ವಸ್ತುಗಳು ಪ್ರದರ್ಶನ ಕಂಡವು. ಸಂಸ್ಥೆಯ ನಿರ್ದೇಶಕ ಮಹಾಂತೇಶ ನೆಲವಿಗಿ, ಪ್ರಶಾಂತ ನೆಲವಿಗಿ, ಲೋಹಿತ್ ನೆಲವಿಗಿ, ಆಡಳಿತಾಧಿಕಾರಿ ಆರ್.ಕೆ. ಕುಲಕರ್ಣಿ, ನಾಗರಾಜ ಕುಲಕರ್ಣಿ, ರುದ್ರಪ್ಪ ಹಾವೇರಿ ಉಪಸ್ಥಿತರಿದ್ದರು.