ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೆಚ್ಚುಗೆ ಗಳಿಸಿದ ಬಾಬಣ್ಣ

Rashmi Kasaragodu
Updated On : 27 Mar 2013, 11:01 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 26
ಕಲೆ, ಸಾಹಿತ್ಯ, ಸಂಸ್ಕೃತಿಗೆ ಮುಂಡರಗಿ ಹೆಸರುವಾಸಿಯಾದ ನಾಡು. ಇಂತಹ ನಾಡಿನಲ್ಲಿ ಕಳೆದ 15-20 ವರ್ಷಗಳಿಂದ ರಂಗಭೂಮಿಯಲ್ಲಿ ಇಲ್ಲಿನ ಅಪರೂಪದ ಕಲಾವಿದ ಬಿ. ಬಾಬು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬಣ್ಣದ ಬದುಕಿನಲ್ಲಿ ಬಾಬಣ್ಣನಾಗಿ ಎಲ್ಲ ಹಿರಿಯ, ಕಿರಿಯ ಕಲಾವಿದರಿಗೆ ಚಿರಪರಿಚಿತರಾಗಿದ್ದಾರೆ. ವೃತ್ತಿ ರಂಗಭೂಮಿಯಲ್ಲಿ ನಟನೆ ಮಾಡುವ ಆಸೆಯಿಂದ ಸರ್ಕಾರಿ ನೌಕರಿಯನ್ನೇ ತೊರೆದು, ನಾಟಕವನ್ನೇ ತಮ್ಮ ಜೀವಾಳವೆಂದು ತಿಳಿದುಕೊಂಡು ಹಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ತಮ್ಮ ಅಮೋಘ ಸೇವೆ ಸಲ್ಲಿಸಿ, ಸದ್ಯ ಮುಂಡರಗಿಯಲ್ಲಿ ಹೆಸರಾಂತ ಛಾಯಾ ಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೆಸರಾಂತ ಕಂಪನಿಗಳಲ್ಲಿ ಅಭಿನಯ: ಮೂಲತಃ ಗದಗ-ಬೆಟಗೇರಿಯವರಾದ ಬಿ. ಬಾಬು, ಮೊದಲಿನಿಂದಲೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಇವರು ಚಿತ್ತರಗಿ ವಿಜಯ ಮಹಾಂತೇಶ್ವರ ನಾಟ್ಯ ಸಂಘ, ಸುಳ್ಳದ ದೇಸಾಯಿ ಕಂಪನಿ, ಗುಡಗೇರಿ ಎನ್.ಬಸವರಾಜ ಕಂಪನಿ, ಇತ್ತೀಚಿನ ಶಿರೂರಿನ ವಿಶ್ವ ರಮ್ಯಭಾರತಿ ನಾಟ್ಯ ಸಂಘ ಸೇರಿದಂತೆ ಅನೇಕ ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದಾರೆ. ತಾಯಿ ಕರಳು, ಬಂಜೆ ತೊಟ್ಟಿಲು, ಬಸ್ ಹಮಾಲ, ಬಸ್ ಕಂಡಕ್ಟರ್, ಕಣ್ಣಿದ್ದರೂ ಬುದ್ಧಿ ಬೇಕು, ಬದುಕು ಬಂಗಾರವಾಯ್ತು, ಮಲಮಗಳು, ಎಚ್ಚರ ತಂಗಿ ಎಚ್ಚರ, ಪೌರಾಣಿಕ ನಾಟಕಗಳಾದ ರೇಣುಕಾ ಎಲ್ಲಮ್ಮ, ರಕ್ತರಾತ್ರಿ, ಸತ್ಯ ಹರಿಶ್ಚಂದ್ರ, ಛತ್ರಪತಿ ಶಿವಾಜಿ, ವೀರ ಸಿಂಧೂರ ಲಕ್ಷ್ಮಣ ಸೇರಿದಂತೆ ಅನೇಕ ನಾಟಕಗಳಲ್ಲಿ ಉತ್ತಮವಾಗಿ ಅಭಿನಯಿಸುವ ಮೂಲಕ ಎಲ್ಲರ ಮನೆ ಮನಗಳಲ್ಲಿ ಉಳಿದುಕೊಂಡಿದ್ದಾರೆ.
ಜನರಿಂದ ಮೆಚ್ಚುಗೆ: ಬಿ. ಬಾಬು ಅವರಿಗೆ ಇದೀಗ 61 ವರ್ಷ. ಈ ವಯಸ್ಸಿನಲ್ಲಿಯೂ ಕಳೆದ 2-3 ವರ್ಷಗಳಲ್ಲಿ ಶಿರೂರಿನ ವಿಶ್ವ ಭಾರತಿ ರಮ್ಯ ನಾಟ್ಯ ಸಂಘದಿಂದ ಬಸವರಾಜ ಬೆಂಗೇರಿಯವರ ನಿರ್ದೇಶನದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿ ಹಾಗೂ ಲಕ್ಕುಂಡಿ ಉತ್ಸವ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆದ ನಾಟಕ ಪ್ರದರ್ಶನಗಳಲ್ಲಿ ಹರಳಯ್ಯ, ಮಧುಅರಸ, ಕೊಂಡಿಮಂಚನ್ನ, ಅಲ್ಲಮಪ್ರಭು ಹೀಗೆ ಅನೇಕ ಪಾತ್ರಗಳನ್ನು ಮಾಡುವ ಮೂಲಕ ನಾಟಕ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ಬೇರೂರಿದ್ದಾರೆ. ಬಸವರಾಜ ಬೆಂಗೇರಿಯವರೇ ರಚಿಸಿದ ಶಿರಹಟ್ಟಿ ಫಕ್ಕೀರೇಶ್ವರ ಮಹಾತ್ಮೆ ನಾಟಕದಲ್ಲಿಯೂ ಅಭಿನಯಿಸಿದ್ದಾರೆ. ಹಿರೇಹಡಗಲಿಯ ಹಾಲ ಶಂಕರ ನಾಟ್ಯ ಸಂಘದಿಂದ ಜರುಗಿದ ಭರತಬಾಹುಬಲಿ ನಾಟಕದಲ್ಲಿ ಬಾಹುಬಲಿಯಾಗಿ ಉತ್ತಮ ಅಭಿನಯದಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಬಿ. ಬಾಬು ಅವರು ಕೇವಲ ವೃತ್ತಿ ರಂಗಭೂಮಿ ನಟರಾಗಿ ಮಾತ್ರ ಕೆಲಸ ಮಾಡಿಲ್ಲ. ಈಚೆಗೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾದ ಮಹಾನವಮಿ ಧಾರಾವಾಹಿಯಲ್ಲಿ ಚಂದಪ್ಪನಾಗಿ ಅಭಿನಯಿಸಿದ್ದಾರೆ. ಅಲ್ಲದೆ ಕಸ್ತೂರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾವ್ಯಕಸ್ತೂರಿ ಧಾರಾವಾಹಿಯಲ್ಲಿಯೂ ಖಳನಾಯಕನಾಗಿ ಉತ್ತಪ್ಪನ ಪಾತ್ರ ಮಾಡಿದ್ದಾರೆ.
ಇತರರಿಗೂ ಸಹಕಾರ: ಮುಂಡರಗಿಗೆ ಯಾವುದೇ ನಾಟಕ ಕಂಪನಿಗಳು ಬಂದರೂ ಅವರು ಮೊದಲು ಬಾಬಣ್ಣನವರನ್ನು ಹುಡುಕುತ್ತಲೇ ಬರುತ್ತಾರೆ. ಇವರೂ ಅವರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಹಾಯ ಸಹಕಾರ ಮಾಡುತ್ತಾ ಬಂದಿದ್ದಾರೆ. ಅನೇಕ ಕಂಪನಿಗಳು ಇಲ್ಲಿಗೆ ಬಂದಾಗ ಅದರಲ್ಲಿ ತಾವೂ ಪಾತ್ರ ಮಾಡುವ ಮೂಲಕ ತಮ್ಮ ರಂಗಭೂಮಿ ಸೇವೆಯನ್ನು ಮುದುವ ರಿಸಿಕೊಂಡು ಸಾಗುತ್ತಿದ್ದಾರೆ. ಅಲ್ಲದೇ ಬಂಡಾಯ ಸಾಹಿತ್ಯ ಸಂಘಟನೆ, ಸೃಷ್ಟಿ ಪ್ರತಿಸೃಷ್ಟಿ ಸಾಹಿತ್ಯ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಂಗ ಬಳಗ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಕ್ಷರ ದಾಸೋಹದ ಬಿಸಿಯೂಟ ನೌಕರರ ಸಂಘಟನೆ, ಎಐಟಿಯುಸಿ, ಕಾರ್ಮಿಕರ ಸಂಘಟನೆ, ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕರ್ತರಾಗಿ, ಸಾಕ್ಷರತಾ ಆಂದೋಲನದಲ್ಲಿ ಜಿಲ್ಲಾ ಸಂಯೋಜಕರಾಗಿ, ಬೀದಿ ನಾಟಕ, ಜಾಗೃತಿ ಗೀತೆ, ಕ್ರಾಂತಿಗೀತೆ, ಸಾಕ್ಷರ ಗೀತೆಗಳನ್ನು ರಚಿಸುವ ಮೂಲಕ ಉತ್ತಮವಾಗಿ ಹಾಡುತ್ತಾರೆ. ಕಂಪ್ಯೂಟರ್, ಟಿವಿಗಳ ಅಬ್ಬರಕ್ಕೆ ಸಿಲುಕಿ ರಂಗಭೂಮಿ ಕಲೆ ಇಂದು ನೇಪಥ್ಯಕ್ಕೆ ಸರಿಯುತ್ತಿರುವ ಇಂತಹ ಸಂದರ್ಭದಲ್ಲಿ ಕಲೆ ಉಳಿವಿಗಾಗಿ ಶ್ರಮಿಸುತ್ತಿರುವ ಇಂತಹ ಕಲಾವಿದರಿಗೆ ಸರ್ಕಾರದ ಪ್ರೋತ್ಸಾಹ ಅವಶ್ಯವಿದೆ.

-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement