ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಅವಶ್ಯ: ಸಂಕನೂರ
ಕನ್ನಡಪ್ರಭ ವಾರ್ತೆ, ಗದಗ, ಮಾ. 26
ರಾಜ್ಯದಲ್ಲಿ ಲಲಿತಕಲಾ ವಿವಿ ಸ್ಥಾಪನೆ ಅಗತ್ಯವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಪ್ರಾ. ಎಸ್.ವಿ. ಸಂಕನೂರ ಹೇಳಿದರು.
ಈಚೆಗೆ ಅವರು ನಗರದ ವಿದ್ಯಾದಾನ ಸಮಿತಿಯ ಜೆ.ಎನ್. ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಲ್ಲಿ ಹೀಗೊಂದು ಸಮಾರಂಭ ಎಂಬ ವಿನೂತನ ಕಾರ್ಯಕ್ರಮದಲ್ಲಿ ಬಿವಿಎ ಅಂತಿಮ ವರ್ಗದ ವಿದ್ಯಾರ್ಥಿಳಿಗೆ ಬೀಳ್ಕೊಡುವ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ 2 ವರ್ಷಗಳ ಹಿಂದೆಯೇ ಲಲಿತಾಕಲಾ ವಿವಿ ಘೋಷಣೆ ಮಾಡಿ ಅದಕ್ಕಾಗಿ ಅನುದಾನವನ್ನು ಮೀಸಲಾಗಿರಿಸಿದೆ. ಆದರೆ, ಲಲಿತಕಲಾ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿಲ್ಲ. ಸರ್ಕಾರವೂ ಚಿತ್ರಕಲಾ ಕ್ಷೇತ್ರಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚಿತ್ರಕಲೆಗಾಗಿಯೇ ಪ್ರತ್ಯೇಕ ವಿವಿ ಪ್ರಾರಂಭವಾದರೆ ಚಿತ್ರಕಲೆಯ ವಿಷಯಗಳಲ್ಲಿ ಅನೇಕ ರೀತಿಯ ಅಧ್ಯಯನಗಳು ಅಲ್ಲಿ ಜರುಗಿ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಅನುಕೂಲವಾಗುತ್ತದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ವಿ.ಸಿ. ಸವಡಿ, ಧಾರವಾಡದ ಕೆ. ಇ. ಬೋರ್ಡ್ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾ. ಮೋಹನ ಸಿದ್ಧಾಂತಿ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಹಾಗೂ ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ. ಮಾಗಳದ ಮಾತನಾಡಿದರು. ಈ ಸಂದರ್ಭದಲ್ಲಿ ಎನ್.ಎ. ಹರ್ಲಾಪುರ, ಕೆ.ವಿ. ಕುಂದಗೋಳ, ಪಿಎಚ್‌ಡಿ ಪಡೆದ ಡಾ. ಎಲ್.ಬಿ. ಚವ್ಹಾಣ ಮತ್ತು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿ.ಡಿ.ಎಸ್.ಟಿ.ಸಿ. ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪಿ.ಎ. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಪಿ.ಬಿ. ಬಂಡಿ ನಿರೂಪಿಸಿದರು. ವಿ.ಎಲ್. ಬೆಳಗಲಿ ವಂದಿಸಿದರು.