ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾಂತಿ ಭೇದಿ: ಆತಂಕದಲ್ಲಿ ಜನತೆ

Rashmi Kasaragodu
Updated On : 27 Mar 2013, 11:09 am

ಕನ್ನಡಪ್ರಭ ವಾರ್ತೆ, ರೋಣ, ಮಾ. 26
ತಾಲೂಕಿನ ಇಟಗಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ನಿತ್ಯ 4 ರಿಂದ 6 ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳು ಮುಂದಾಗದೇ ಇರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಟಗಿ ಗ್ರಾಮವು 4 ವಾರ್ಡ್‌ಗಳನ್ನೊಳಗೊಂಡು ಸುಮಾರು 3500 ರಷ್ಟು ಜನಸಂಖ್ಯೆ ಹೊಂದಿದೆ. ಇಲ್ಲಿ ಸುಮಾರು ಅರ್ಧ ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಅಶುದ್ಧವಾಗಿದೆ. ನೀರಿನಲ್ಲಿ ಆಗಾಗ್ಗೆ ಕಸ, ಕಡ್ಡಿ ಬರುತ್ತವೆ. ನೀರು ತಿಳಿಯಾಗಿರದೇ ಗಡುಸಾಗಿದ್ದರೂ ಗ್ರಾಮದ ಜನತೆ ಅನಿವಾರ್ಯವಾಗಿ ಅದನ್ನೇ ಕುಡಿಯತ್ತಿದ್ದಾರೆ. ವಾಂತಿ ಭೇದಿಯುಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಈಗಾಗಲೇ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.  
ವಾಂತಿ ಭೇದಿಗೆ ಮುಖ್ಯ ಕಾರಣ: ಗ್ರಾಮಕ್ಕೆ 4 ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. 3 ಕೊಳವೆ ಬಾವಿಗಳು 4 ಕಿಮೀ ದೂರದ ಚಿಕ್ಕಅಳಗುಂಡಿ ಗ್ರಾಮದ ಹತ್ತಿರದಿಂದ, ಇಟಗಿ ಗ್ರಾಮದ ಮಧ್ಯದಲ್ಲಿನ 1 ಕೊಳವೆ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಆದರೆ ಪೂರೈಕೆಯಾಗುತ್ತಿರುವ ಪೈಪ್‌ಲೈನ್‌ಗಳು ಅಲ್ಲಲ್ಲಿ ಸೋರಿಕೆಯಾಗುತ್ತಿವೆ. ಅವುಗಳಿಂದ ಗಲೀಜು, ಗಬ್ಬು ವಾಸನೆ, ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಮತ್ತು ಗ್ರಾಮದಲ್ಲಿನ ಒಂದು ಕೊಳವೆ ಬಾವಿಯ ಸುತ್ತ ಕೊಳಕಿನಿಂದ ತುಂಬಿದ ದೊಡ್ಡದಾದ ತೆಗ್ಗು ಇದೆ. ಆ ನೀರು ಹರಿದು ಹೋಗದೇ ಅಲ್ಲಿಯೇ ಇಂಗುತ್ತದೆ. ಅದೇ ನೀರು ಮೇಲ್ಮಟ್ಟದ ಜಲಗಾರಕ್ಕೆ ಪೂರೈಕೆಯಾಗುತ್ತಿದ್ದು, ಜನತೆ ಅದನ್ನೇ ಕುಡಿಯುವುದರಿಂದ ವಾಂತಿ ಭೇದಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
40ಕ್ಕೂ ಹೆಚ್ಚು ಪ್ರಕರಣ: ಕಳೆದ 10 ದಿನಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ವಾಂತಿ ಭೇದಿಯಿಂದಾಗಿ ರೋಣ ಪಟ್ಟಣದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶೀವಲೀಲಾ ಹೂಗಾರ (30), ಮಹೇಶ ಸಜ್ಜನರ (5), ಬಾಳಮ್ಮ ಉದ್ದಾರ (68), ಶಬನಾ ಜಂಗ್ಲೇಪ್ಪನವರ (12), ಅಂದಪ್ಪ ಜಡದೇಲಿ (75), ಮಹೇಶ ಮಾಸಗಟ್ಟಿ (14), ಇಸ್ಮಾಯಿಲ್‌ಸಾಬ ಹೋರಪೇಟಿ (35), ರೈಮಾನಸಾಬ ದರಗಾದ (70) ಸೇರಿದಂತೆ ಅನೇಕರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಅನೇಕರು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.  ಓರ್ವ ಸಾವು: ಗ್ರಾಪಂನವರು ಬಿಡುವ ನೀರನ್ನು ಕುಡಿದು ವಾಂತಿ ಭೇದಿಯುಂಟಾಗಿದ್ದರಿಂದ ನಮ್ಮ ತಂದೆ ರೈಮಾನಸಾಬ ದರಗಾದ 2 ದಿನಗಳ ಕಾಲ ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ಆದರೆ, ಚಿಕಿತ್ಸೆ ಫಸಲಿಸದೇ 4 ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಸದೃಢವಾಗಿದ್ದ ನಮ್ಮ ತಂದೆಯವರು ಈ ಕಲುಷಿತ ನೀರನ್ನು ಸೇವಿಸಿ ಮೃತಪಟ್ಟಿದ್ದು, ನನ್ನ ಮಗಳೂ ವಾಂತಿ ಭೇದಿಯಿಂದಾಗಿ ಹಾಸಿಗೆ ಹಿಡಿದಿದ್ದಾಳೆ. ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಇಟಗಿ ಗ್ರಾಮದ ಶೈನಾಜ ದರಗಾದ 'ಕನ್ನಡಪ್ರಭ'ದೊಂದಿಗೆ ತಮ್ಮ ನೋವು ಹಂಚಿಕೊಂಡರು.

- ಪಿ.ಎಸ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement