ಸದೃಢ ಸಮಾಜಕ್ಕೆ ಉನ್ನತ ಶಿಕ್ಷಣ ಅವಶ್ಯ
ಕನ್ನಡಪ್ರಭ ವಾರ್ತೆ, ಗದಗ, ಮಾ. 26
ಸಮಾಜವು ಸದೃಢವಾಗಿ ಬೆಳೆಯಲು ಉನ್ನತ ಶಿಕ್ಷಣ ಅತ್ಯವಶ್ಯ ಎಂದು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಮಂಗಳವಾರ ನಗರದ ಕೆಎಲ್ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾವಿದ್ಯಾಲಯದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದು ಶಿಕ್ಷಣ ಎಂಬುದು ಅತ್ಯಂತ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಲಿಕಾ ವೇಳೆಯಲ್ಲಿ ಶಿಕ್ಷಕರು ನೀಡುವ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಶಿಕ್ಷಣ ಪಡೆದರೂ ನೀವು ಪಡೆಯುವ ಶಿಕ್ಷಣದಲ್ಲಿ ಶ್ರದ್ಧೆ ಹೊಂದಿ. ಅಂದಾಗ ಮಾತ್ರ ಶಿಕ್ಷಣದಲ್ಲಿ ಉನ್ನತಿ ಹೊಂದಲು ಸಹಕಾರಿಯಾಗುವುದು. ಯಶಸ್ಸಿನ ಹಿಂದೆ ವಿದ್ಯಾರ್ಥಿಗಳು ಬೆನ್ನು ಹತ್ತದೇ ನಿಮ್ಮನ್ನೇ ಯಶಸ್ಸು ಬೆನ್ನುಹತ್ತಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪಾಲಕರ ಪಾತ್ರವು ಪ್ರಮುಖವಾಗಿದೆ. ಪಾಲಕರಾದವರು ತಮ್ಮ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಪ್ರೋತ್ಸಾಹಿಸಬೇಕು. ತಂದೆ-ತಾಯಿ ತಮ್ಮ ಮಕ್ಕಳಿಗೆ ತಮ್ಮ ಅಂತಸ್ತಿಗೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯಿರದ ಶಿಕ್ಷಣ ನೀಡುವುದರಿಂದ ಅವರ ಕಲಿಕೆಯಲ್ಲಿ ಹಿನ್ನಡೆಯಾಗುವ ಸಂಭವವಿರುತ್ತದೆ. ವಿದ್ಯಾರ್ಥಿಗಳು ತಮಗೆ ಯಾವ ರಂಗದಲ್ಲಿ ಆಸಕ್ತಿಯಿದೆ ಎಂಬುದನ್ನು ಪಾಲಕರಿಗೆ ಅರಿಕೆ ಮಾಡಬೇಕು. ಇಂದು ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಸತತ ಪರಿಶ್ರಮದಿಂದ ಯಶಸ್ಸು ಕಾಣಬಹುದಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದಿ ಸತತ ಪರಿಶ್ರಮ ಹೊಂದುವ ಮೂಲಕ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಡಾ. ವಿ.ಐ. ಕುರಗೋಡ ವಹಿಸಿದ್ದರು. ಈ ಸಂದರ್ಭದಲ್ಲಿ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳಿಯಣ್ಣವರ, ವಿ.ಎಂ. ಕಿನಗಿ, ಬಿಬಿಎ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡ್ರ, ಆರ್.ಎಂ. ಹರ್ಲಾಪುರ ಮುಂತಾದವರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ವಿಧ್ಯಾರ್ಥಿನಿಯರಿಂದ ಪ್ರಾರ್ಥನೆ ಜರುಗಿತು. ಡಾ. ವೀಣಾ ಹೂಗಾರ ನಿರೂಪಿಸಿದರು. ಎಂ.ಎಸ್. ಮಾಗುಂಡ ವಂದಿಸಿದರು.