ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭ್ಯರ್ಥಿಗಳ ಆಯ್ಕೆ ಕಗ್ಗಂಟು

Rashmi Kasaragodu
Updated On : 28 Mar 2013, 10:50 am

ಕನ್ನಡಪ್ರಭ ವಾರ್ತೆ, ಗದಗ, ಮಾ. 27
ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಕಾರ್ಯಕರ್ತರು ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆದರೆ, ಪ್ರಮುಖ ಪಕ್ಷಗಳು ಇಂದಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ಚಿತ್ರಣ ಸ್ಪಷ್ಟವಾಗುತ್ತಿಲ್ಲ.
ಈ ವಿಷಯದಲ್ಲಿ ಕಾಂಗ್ರೆಸ್ ಮಾತ್ರ ಗದಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರ ಹೆಸರನ್ನು ಬಿಡುಗಡೆ ಮಾಡಿದೆ. ಬಿಜೆಪಿಯು ಹಾಲಿ ಸಚಿವ ಕಳಕಪ್ಪ ಬಂಡಿಗೆ ರೋಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದನ್ನು ಹೊರತು ಪಡಿಸಿದಲ್ಲಿ, ಇನ್ನುಳಿದ ಕ್ಷೇತ್ರಗಳಲ್ಲಿ ಯಾವುದೇ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ, ಬಹಿರಂಗ ಪಡಿಸಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದಲ್ಲಿ, ಪಕ್ಷಗಳು ಬೇಗನೇ ಹೆಸರು ಘೋಷಣೆ ಮಾಡಿದಲ್ಲಿ ಬಂಡಾಯದ ಬಿಸಿ ಎದುರಿಸುವ ಭಯದಿಂದ ಹೆಸರು ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿವೆ ಎನ್ನುವ ವಿಷಯ ಸ್ಪಷ್ಟವಾಗುತ್ತದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಳಂಬ: ಜಿಲ್ಲೆಯ 3 ಜನ ಬಿಜೆಪಿ ಶಾಸಕರು ಈ ಮೊದಲು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದು, ನಂತರ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಹೇಳಿದ್ದು, ಬಿಜೆಪಿ ಮತ್ತು ಕೆಜೆಪಿ  ಈ ಕ್ಷೇತ್ರಗಳಲ್ಲಿ ಇಂದಿಗೂ ಅಭ್ಯರ್ಥಿಗಳಿಗೆ ಟಿಕೆಟ್ ಅಂತಿಮಗೊಳಿಸುವಲ್ಲಿ ವಿಫಲವಾಗಿವೆ. ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹಾಗೂ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಈಗಾಗಲೇ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇದು ಬಿಜೆಪಿ ನಾಯಕರಿಗೆ ಇಂದಿಗೂ ಇವರ ನಿರ್ಧಾರ ಖಚಿತ ಎನ್ನುವುದು ಕಂಡು ಬಾರದ ಕಾರಣ ಬಿಜೆಪಿ ಈಗಾಗಲೇ ಸಿದ್ಧಪಡಿಸಿರುವ ತನ್ನ ಮೊದಲ ಪಟ್ಟಿಯಲ್ಲಿ ಇವರ ಹೆಸರುಗಳು ಕಾಣೆಯಾಗಿವೆ.
ಕಾಂಗ್ರೆಸ್ ಹೊರತಾಗಿಲ್ಲ: ಈ ವಿಷಯದಲ್ಲಿ ಕಾಂಗ್ರೆಸ್ ಕೂಡ ಹೊರತಾಗಿಲ್ಲ. ರೋಣ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕ ಜಿ.ಎಸ್. ಪಾಟೀಲ ಒಬ್ಬರೇ ಆಕಾಂಕ್ಷಿಗಳಾಗಿ ಪಕ್ಷದ ವರಿಷ್ಠರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮೊದಲ ಪಟ್ಟಿಯಲ್ಲಿ ಅವರ ಹೆಸರೂ ಅಂತಿಮಗೊಂಡಿಲ್ಲ. ನರಗುಂದ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಯುವ ಕಾಂಗ್ರೆಸ್ ಮುಖಂಡ ದಶರಥ (ಕೆಂಚಪ್ಪ) ಗಾಣಿಗೇರ, ದಿ. ಕೆ.ಎಚ್. ಪಾಟೀಲ ಅನುಯಾಯಿ ಎಸ್.ಎನ್. ಕಾತರಕಿ ಹಾಗೂ ಗದಗ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲ ಇನ್ನು ಪೂರ್ಣಗೊಂಡಿಲ್ಲ. ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು 10ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಅಲ್ಲಿನ ಟಿಕೆಟ್ ಅಂತಿಮಗೊಳಿಸುವಲ್ಲಿಯೂ ಪಕ್ಷಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳು ಬಹಿರಂಗಗೊಂಡಿಲ್ಲ.
ಜೆಡಿಎಸ್ ಕಾದು ನೋಡುವ ತಂತ್ರ: ಪ್ರಾದೇಶಿಕ ಪಕ್ಷ ಜೆಡಿಎಸ್ ರೋಣ ಕ್ಷೇತ್ರಕ್ಕೆ ಹೇಮಗಿರೀಶ ಹಾವಿನಾಳ ಅವರ ಹೆಸರನ್ನು ಅಂತಿಮಗೊಳಿಸಿದ್ದು, ಇನ್ನುಳಿದ ಕ್ಷೇತ್ರಗಳ ವಿಷಯದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ. ಅದರಲ್ಲಿಯೂ ನರಗುಂದ ಕ್ಷೇತ್ರದ ವಿಷಯದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರನ್ನು ಸೆಳೆದು ಸ್ಪರ್ಧೆಗಿಳಿಸುವ ತವಕದಲ್ಲಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ಬಿಎಸ್‌ಆರ್ ಜತೆ ಹೊಂದಾಣಿಕೆಯ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಬಿಎಸ್‌ಆರ್ ನಡೆ: ಬಿಎಸ್‌ಆರ್ ಸಂಸ್ಥಾಪಕ ಬಿ. ಶ್ರೀರಾಮುಲು ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, ಅದು ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸಾಬೀತಾಗಿದೆ. ಈಗಾಗಲೇ ಗದಗ ಕ್ಷೇತ್ರದಿಂದ ಅನಿಲ ಮೆಣಸಿನಕಾಯಿ, ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಜಯಶ್ರೀ ಹಳ್ಳೆಪ್ಪನವರ ಹೆಸರನ್ನು ಅಂತಿಮಗೊಳಿಸಿದೆ. ರೋಣ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದರೆ, ನರಗುಂದ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಬಿಎಸ್‌ಆರ್ ಮತ್ತು ಜೆಡಿಎಸ್ ಹೊಂದಾಣಿಕೆಯ ಮಾತುಗಳು ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರೇ ಸ್ಪಷ್ಟನೆ ನೀಡಬೇಕಿದೆ.
ಕೆಜೆಪಿ ಕಥೆಯೂ ಅಷ್ಟೆ: ಜಿಲ್ಲೆಯಲ್ಲಿ ಲಿಂಗಾಯತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಯಡಿಯೂರಪ್ಪನವರ ಕೆಜೆಪಿ ನಡೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಗದಗ ಕ್ಷೇತ್ರದಿಂದ ಎಸ್.ಬಿ. ಸಂಕಣ್ಣವರ ಹಾಗೂ ರಾಜು ಕುರುಡಗಿ ಹೆಸರುಗಳು ಮಾತ್ರ ಕೇಳಿ ಬರುತ್ತಿದ್ದು, ಪಕ್ಷ ಇಂದಿಗೂ ಅಂತಿಮಗೊಳಿಸಿಲ್ಲ. ರೋಣ, ನರಗುಂದ ಹಾಗೂ ಶಿರಹಟ್ಟಿ ಕ್ಷೇತ್ರಗಳಲ್ಲಿಯೂ ಕೆಜೆಪಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು ಸದ್ಯದಲ್ಲಿಯೇ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ಖಚಿತ ಪಡಿಸುತ್ತಿವೆ.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement