ಕಾಮ ರತಿಗೆ 149ನೇ ವರ್ಷ
ಕನ್ನಡಪ್ರಭ ವಾರ್ತೆ, ಗದಗ, ಮಾ. 27
ನಗರದಲ್ಲಿ ಮಾ. 27 ರಿಂದ 31 ರವರೆಗೆ ಕಾಮ-ರತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅದರಲ್ಲಿ ವಿಶೇಷವಾಗಿ ನಗರದ ಕಿಲ್ಲಾ ಓಣಿಯಲ್ಲಿರುವ ಕಾಮ-ರತಿ 149 ವರ್ಷಗಳ ಇತಿಹಾಸ ಹೊಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಇಲ್ಲಿ ಸ್ಥಾಪಿಸಲಾಗುವ ಕಾಮ-ರತಿಗೆ 25 ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ಹಾಕಿ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬ ಆಚರಿಸುವ ಸಂಪ್ರದಾಯವಿದೆ.
ನಮ್ಮ ದೇಶದಲ್ಲಿ ಹೋಳಿ ಹಬ್ಬವು ತನ್ನದೇಯಾದ ವಿಶೇಷತೆ ಹೊಂದಿದೆ. ಪ್ರಾಚೀನ ಕಾಲದ ಹಬ್ಬವೆಂದೇ ಹೇಳಲಾಗುವ ಈ ಹೋಳಿ ಹುಣ್ಣಿಮೆ ಎಂದರೆ ಎಲ್ಲರಿಗೂ ನೆನಪಿಗೆ ಬರೋದು ಬಣ್ಣ ಬಣ್ಣಗಳಿಂದ ಅಲಂಕೃತಗೊಂಡ ಕಾಮ-ರತಿಯನ್ನು ನೋಡುವುದೇ ಒಂದು ಸಂಭ್ರಮ. ಪರಸ್ಪರ ಬಣ್ಣ ಎರಚಾಡಿಕೊಂಡು ಸಂಭ್ರಮಿಸುವ ಯುವಕರಿಗಂತೂ ಹಬ್ಬವೋ ಹಬ್ಬ. ಇವುಗಳ ಮಧ್ಯ ವಿಶೇಷವಾಗಿ ಕಾಣುವುದು ಗದಗನ ಕಿಲ್ಲಾ ಓಣಿಯಲ್ಲಿ ಕಳೆದ 149 ವರ್ಷಗಳಿಂದಲೂ ಪ್ರತಿಷ್ಠಾಪಿಸಲಾಗುತ್ತಿರುವ ಈ ಕಾಮ-ರತಿಯನ್ನು ಸರ್ಕಾರಿ ಕಾಮ-ರತಿಯಂದೇ ಪ್ರಸಿದ್ಧಿ ಪಡೆದಿದೆ.
ಹಿನ್ನೆಲೆ: ನೂರಾರು ವರ್ಷಗಳಿಂದಲೂ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮ ಬಣ್ಣದ ಗೊಂಬೆಗಳ ತಯಾರಿಕೆಯಲ್ಲಿ ಪ್ರಸಿದ್ಧಿ. ಅಂದು ಹಿರಿಯರು ಒಂದುಗೂಡಿ ನಗರದಲ್ಲಿ ವಿಜೃಂಭಣೆಯ ಹೋಳಿ ಹುಣ್ಣಿಮೆ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಕಾಮ-ರತಿಯನ್ನು ಕಿನ್ನಾಳದಲ್ಲಿ ತಯಾರಿಸಿಕೊಂಡು ತಂದು ಪ್ರತಿಷ್ಠಾಪಿಸಲಾಯಿತು. ಅಂದು ಯಾವುದೇ ರೀತಿಯ ವಾಹನ ಸೌಕರ್ಯವಿರದೇ ಇರುವುದರಿಂದ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಿನ್ನಾಳದಿಂದ ಕಾಮ-ರತಿಯನ್ನು ಹೊರಸಿನ ಮೇಲೆ ಹೊತ್ತು ಭವ್ಯ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿದರು.
ಸಾರ್ವಜನಿಕರ ಆಭರಣ ಬಳಕೆ: ಕಿಲ್ಲಾ ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಈ ಕಾಮ-ರತಿಗೆ ನಗರದ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ಹಾಗೂ ಓಣಿಯ ಸಾರ್ವಜನಿಕರು ತಮ್ಮ ಮನೆಯಲ್ಲಿನ ಬಂಗಾರದ ಒಡವೆಗಳನ್ನು ತಂದು ಕಾಮ-ರತಿಗೆ ಶೃಂಗರಿಸುವರು. ಅಲ್ಲದೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಈ ಪದ್ಧತಿಯನ್ನು ಇಂದಿನ ಯುವ ಸಮೂಹವೂ ಮುಂದುವರೆಸಿಕೊಂಡು ಬಂದಿರುವುದು ವಿಶೇಷ. ಕಾಮ-ರತಿಗೆ ತಾಳಿಸರ, ಚಪ್ಲಹಾರ, ನತ್ತು, ನಡಪಟ್ಟಿ, ಮೂಗುತಿ, ಸರಗಿ, ಬೋರಮಾಳ, ವಂಡಿ-ಡಾಬು, ತೀಕಿ, ಬಾಜುಬಂದ, ಕಿವಿಓಲೆ, ಮೇಲಗುಂಡಿನ ಸರ, ಗುಂಡಗಡಗಿ ಸೇರಿದಂತೆ ನೂರಕ್ಕೂ ಹೆಚ್ಚು ಬಗೆಯ ಆಭರಣಗಳನ್ನು ಹಾಕಲಾಗುತ್ತದೆ.
20-25 ಕೆಜಿ ಬಂಗಾರ: ಇಲ್ಲಿ ಸಾರ್ವಜನಿಕರು ತಮ್ಮ ಬಂಗಾರದ ಆಭರಣಗಳನ್ನು ಮನೆಯಿಂದ ತಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ರತಿ-ಕಾಮರಿಗೆ ಅಲಂಕರಿಸುತ್ತಾರೆ. ಸುಮಾರು 20-25 ಕೆಜಿಗೂ ಅಧಿಕ ಬಂಗಾರದ ಆಭರಣಗಳಿಂದ ಶೃಂಗರಿಸುತ್ತಾರೆ. ಮಾ. 30ರಂದು ರಾತ್ರಿ ಸಾರ್ವಜನಿಕರಿಂದ ಸಂಗ್ರಹಿಸುವ ಈ ಆಭರಣಗಳ ಮೇಲೆ ವಾರಸುದಾರರ ಹೆಸರಿರುವ ಚೀಟಿಯನ್ನು ಹಾಕಲಾಗುತ್ತದೆ. ಮಾ. 31 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ನಂತರ ಬಂಗಾರದ ಆಭರಣಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತದೆ.
-ಅಜೀಜಅಹ್ಮದ ಬಳಗಾನೂರ