ಪ್ರಮುಖ ಪಕ್ಷಗಳ ಟಿಕೆಟ್ಗಾಗಿ ಕಸರತ್ತು
ಶಿರಹಟ್ಟಿ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮುಖ ಪಕ್ಷಗಳ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳಿಂದ ಕಸರತ್ತು ತೀವ್ರಗೊಂಡಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿನ ಗೊಂದಲ ಮುಗಿದಿಲ್ಲ. ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಹೆಣಗಾಡುತ್ತಿವೆ.
ಬೇಗನೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರೆ ಪಕ್ಷದಲ್ಲಿ ಭುಗಿಲೇಳುವ ಅಸಮಾಧಾನ, ಆಕ್ರೋಶ, ಬಂಡಾಯದ ಭೀತಿಯಿಂದ ಪಕ್ಷಗಳಲ್ಲಿ ತಳಮಳ ಉಂಟಾಗಿದೆ.
ಬೇಸಿಗೆ ಬಿಸಿಲಿನ ಪ್ರತಾಪದ ಮಧ್ಯೆಯೂ ಚುನಾವಣೆಯ ಕಾವು ಹೆಚ್ಚುತ್ತಿದೆ. ಮಾಜಿ ಮುಂಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಕೂಡ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿದೆ. ಮಾಜಿ ಸಚಿವ ಬಿ. ಶ್ರೀ ರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ದಿಂದ ಅಧಿಕೃತ ಅಭ್ಯರ್ಥಿ ಘೋಷಣೆಯಾಗಿದೆ. ಸ್ಪರ್ಧೆಗೆ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅಂತಿಮ ರೂಪ ನೀಡುವಲ್ಲಿ ಎಲ್ಲ ಪಕ್ಷಗಳು ತಿಣುಕಾಡುತ್ತಿವೆ.
ಮೊದಲೇ ಅರ್ಜಿ ಸ್ವೀಕಾರ: ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೇ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಪೂರ್ವಭಾವಿ ಸಭೆ ನಡೆಸಿ, ಸ್ಪರ್ಧಾ ಆಕಾಂಕ್ಷಿಗಳ ಅರ್ಜಿ ಪಡೆದಿದ್ದವು. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದು, ಟಿಕೆಟ್ ಪಡೆಯಲು ತಮ್ಮ ತಮ್ಮ ನೆಚ್ಚಿನ ನಾಯಕರ ಮನೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ಪಕ್ಷಗಳು ಅಳೆದೂ ತೂಗಿ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿವೆ. ಅಲ್ಲದೆ ಕೆಲ ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿ ಕೊಡಲು ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಕ್ಷದ ನಾಯಕರು ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಅವರ ಹಿನ್ನೆಲೆ, ಜನಪ್ರಿಯತೆ ಅಲ್ಲದೇ ಆರ್ಥಿಕ ಸದೃಢತೆ ಹೊಂದಿದವರಿಗೆ ಆಧ್ಯತೆ ನೀಡಬೇಕೆಂದು ಮುಕ್ತವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಪಕ್ಷಕ್ಕಿಂತಲೂ ಚುನಾವಣೆಯಲ್ಲಿ ಹಣವೂ ಬಹಳ ಮುಖ್ಯ ಎಂದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಭೆ, ಸಮಾರಂಭಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಮುಕ್ತವಾಗಿ ಹೇಳಿದ್ದು, ಎಲ್ಲರನ್ನೂ ಸಮಾಧಾನಪಡಿಸಲಾಗದ ಹಿನ್ನೆಲೆಯಲ್ಲಿ ಬಂಡಾಯ ಭೀತಿ ಸಹಜ ಎನ್ನುವಂತಾಗಿದೆ.
ಶಿರಹಟ್ಟಿ ಮೀಸಲು ವಿಧಾನಸಭಾ ಮಕ್ಷೇತ್ರದಲ್ಲಿಯೂ ವಲಸೆ ರಾಜಕೀಯ ಆರಂಭವಾಗಿದ್ದು, ಟಿಕೆಟ್ ಆಕಾಂಕ್ಷಿತರಲ್ಲಿ ಹೊರಗಿನವರೇ ಕಾಣುತ್ತಿದ್ದು, ಸ್ಥಳೀಯರಿಗೆ ಟಿಕೆಟ್ ನೀಡಬೇಕೆ ಅಥವಾ ಹೊರಗಿನ ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆ ಎಂಬುದು ಮಾತ್ರ ಚರ್ಚೆಯ ವಿಷಯವಾಗಿದೆ. ಈ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ 91,731 ಪುರುಷ, 85,338 ಮಹಿಳಾ ಹಾಗೂ ಇತರೇ 3 ಸೇರಿ ಒಟ್ಟು 1,77,072 ಮತದಾರರಿದ್ದು, ಎಲ್ಲರೂ ಕುತೂಹಲದಿಂದ ಯಾವ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾಯುತ್ತಿದ್ದಾರೆ.
-ಮಹದೇವಪ್ಪ ಎಂ. ಸ್ವಾಮಿ