ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರ ಕಲಾವಿದರ ಮಾಸಾಶನ ಹೆಚ್ಚಿಸಲಿ

Rashmi Kasaragodu
Updated On : 28 Mar 2013, 10:53 am

ಕನ್ನಡಪ್ರಭ ವಾರ್ತೆ, ಗದಗ, ಮಾ. 27
ಸರ್ಕಾರ ವೃತ್ತಿ ರಂಗಭೂಮಿ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ತೀರಾ ಕಡಿಮೆ ಇದ್ದು, ಅದರಿಂದ ಜೀವನ ನಿರ್ವಹಣೆ ಕಷ್ಟ. ಅವರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಕಲಾವಿದರಿಗೆ ಕೊಡುತ್ತಿರುವ ಮಾಸಾಶನ ಹೆಚ್ಚಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ ಸಾರಂಗಯ್ಯಸ್ವಾಮಿ ಸಾರಂಗಮಠ ಹೇಳಿದರು.
ಅವರು ಬುಧವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಪಂ. ಪುಟ್ಟರಾಜ ವೃತ್ತಿ ರಂಗಭೂಮಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಗೀತೆಗಳ ಕಾರ್ಯಕ್ರಮ ಹಾಗೂ ರಂಗಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲಾವಿದರ ಬದುಕು ಹಸನಾಗಬೇಕು. ಕಲಾವಿದರು ಸುಖ-ಸಂತೋಷದಿಂದ ಇರುವಂತಾಗಬೇಕು. ಅಂದಾಗ ಮಾತ್ರ ರಂಗಭೂಮಿ ಕಲೆಗೆ ಒಂದು ಬೆಲೆ ಬರುವುದು. ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಕಲಾವಿದರಿಗೆ ಸನ್ಮಾನ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಆಸ್ವಾದಿಸುವಂತಾಗಿಬೇಕು: ಕಲಾವಿದರು ಪ್ರಶಸ್ತಿ ಬೆನ್ನು ಹತ್ತಿ ಹೋಗುತ್ತಿರುವುದು ವಿಷಾದನೀಯ. ಪ್ರಶಸ್ತಿಗಳು ಕಲಾವಿದರನ್ನು ಹುಡುಕಿಕೊಂಡು ಬರಬೇಕು. ರಂಗಭೂಮಿ ತನ್ನ ಕಲೆಯನ್ನು ಮೆಚ್ಚುವಂತಹ ಕಲಾವಿದರು ಹೊರಹೊಮ್ಮಬೇಕು. ಯಾವ ರೀತಿಯಲ್ಲಿ ಹೂವನ್ನು ಎಲ್ಲರೂ ಅಸ್ವಾದಿಸುವರೋ ಅದೇ ರೀತಿ ರಂಗಭೂಮಿ ಕಲಾವಿದರ ಕಲೆಯನ್ನು ಜನರು ಆಸ್ವಾದಿಸುವಂತಾಗಬೇಕು. ಅಂದಾಗ ಕಲೆಗೆ ಜೀವ ಸಿಕ್ಕಂತಾಗುತ್ತದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಹಿರಿಯ ರಂಗಭೂಮಿ ಕಲಾವಿದರಾಗಿದ್ದಾರೆ. ಅವರಲ್ಲಿನ ಪ್ರತಿಭೆಗಳು ಹೊರಬರಲು ಕಲಾಸೇವೆ ಮಾಡಲು ಅವಕಾಶಗಳು ಸಿಗಬೇಕು. ಇಂತಹ ಕಾರ್ಯಕ್ರಮಕ್ಕೆ ಕಲಾವಿದರಷ್ಟೇ ಅಲ್ಲ, ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಕಲಾವಿದರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ನಾಟಕಗಳು ಜನಪ್ರಿಯ: ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ನಾಟಕಗಳು ಎಂದರೆ ಪ್ರತಿದಿನ ಕಲೆಯನ್ನು ತೋರಿಸುವುದಾಗಿದೆ. ಹಿಂದೆ ರಂಗಭೂಮಿಯ ಕಲಾವಿದರೇ ಚಲನಚಿತ್ರಗಳಲ್ಲಿ ಮಿಂಚಿದ್ದಾರೆ. ನಾಟಕ ಮತ್ತು ನಾಟಕ ಕಲೆಗಳಿಗೆ ಅಪಾರ ಶಕ್ತಿಯಿದೆ. ಅದನ್ನು ಉಳಿಸಿ ಬೆಳೆಸುವುದು ಅವಶ್ಯವಾಗಿದೆ. ಅಲ್ಲದೇ ರಂಗಭೂಮಿ ಕಲಾವಿದರು ನಾಟಕಗಳಿಗೆ ಜೀವಂತಿಕೆಯನ್ನಿಟ್ಟು ಕೆಲಸ ಮಾಡುವುದರಿಂದ ನಾಟಕಗಳು ಇಂದಿಗೂ ಜನಪ್ರಿಯವಾಗಿದೆ ಎಂದು ಹೇಳಿದರು.
ನಾಟಕಗಳ ತಂಡವನ್ನು ಕಟ್ಟುವುದು ಸುಲಭದ ಕೆಲಸವಲ್ಲ. ನಾಟಕ ತಂಡ ಕಟ್ಟುವುದರಿಂದ ಕಲಾವಿದರಲ್ಲದೆ ಅನೇಕರು ಜೀವನ ಸಾಗಿಸುವಂತಹ ಅವಕಾಶಗಳು ಸಿಗುತ್ತವೆ. ಸರ್ಕಾರಗಳು ನಾಟಕ ಕಂಪನಿಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಾಯಧನವನ್ನು ನೀಡಿ ರಂಗಭೂಮಿಯ ಈ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಬೇಕು ಎಂದರು.
'ರಂಗಭೂಮಿ ಇತಿಹಾಸ ಹಾಗೂ ರಂಗಭೂಮಿ ನಡೆದು ಬಂದ ದಾರಿ' ಕುರಿತು ಅಶ್ವಿನಿ ಹಿರೇಮಠ ಮಾತನಾಡಿದರು. ಪಂಚಾಕ್ಷರಿ ಅಣ್ಣಿಗೇರಿ, ರಂಗಪ್ಪ ಹುಯಿಲಗೋಳ, ಶಾರಮ್ಮ ಹೊಂಬಳ, ಯಶೋದಾ ಬಳ್ಳಾರಿ, ಮೇಘಮಾಲಾ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು. ಪರಿಮಳಾ ಕಲಾವಂತಗೆ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ತಿರ್ಲಾಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement