ಹೋಳಿ ಹಬ್ಬದ ಸಡಗರಕ್ಕಿಲ್ಲ ಬರ
ನರಗುಂದ: ಗದಗ ಜಿಲ್ಲೆಯಲ್ಲಿಯೇ ನರಗುಂದ ತಾಲೂಕು ನೀರಾವರಿ ಪ್ರದೇಶವೆಂದು ಹೆಸರು ಗಳಿಸಿತ್ತು. ಆದರೆ, ಸತತ 2 ವರ್ಷಗಳ ಬರಗಾಲದಿಂದ ಜನತೆ ತತ್ತರಿಸಿದ್ದು, ಬರದ ಬಿಸಿಯ ಮಧ್ಯೆಯೂ ತಾಲೂಕಿನ ಜನತೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಪಟ್ಟಣದಲ್ಲಿ ಪ್ರತಿ ಗಲ್ಲಿಗಲ್ಲಿಯಲ್ಲಿಯೂ ವಿವಿಧ ಸಮುದಾಯದ ಜನತೆ ಕಾಮಣ್ಣನ ಮೂರ್ತಿ ಸ್ಥಾಪಿಸಿ, ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಹುಣ್ಣಿಮೆಯ ದಿನ ಕೆಲವು ಜನಾಂಗದವರು ಬಿಳಿಹಾಳಿಯಲ್ಲಿ ಕಾಮ ಮೂರ್ತಿಯ ಚಿತ್ರ ತೆಗೆದು ಓಣಿಯಲ್ಲಿನ ವಿದ್ಯುತ್ ಕಂಬಗಳಿಗೆ ತೂಗುಹಾಕಿ ಮಾರನೇ ದಿನ ದಹನ ಮಾಡುವರು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಕಾಮ ಮೂರ್ತಿ ದಹನ ಮಾಡಿ, ಬಣ್ಣದ ಓಕುಳಿಯಲ್ಲಿ ಪಾಲ್ಗೊಂಡು, ವಿವಿಧ ರೀತಿಯ ವೇಷಗಳನ್ನು ಧರಿಸಿಕೊಂಡು ಜಾಂಜ್, ಕರಡಿ ಮೇಳದ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತಿ ಸಂಭ್ರಮಿಸುವರು.
ಕಟ್ಟಿಗೆ ಸಂಗ್ರಹ: ಈ ಹೋಳಿ ಹುಣ್ಣಿಮೆ ಹಬ್ಬ ಬಂತೆಂದರೆ ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ಕಾಮನ ದಹನಕ್ಕೆ ಬೇಕಾಗುವ ಕಟ್ಟಿಗೆಯನ್ನು ಹುಡುಗರು ರಾತ್ರಿಯ ವೇಳೆಯಲ್ಲಿ ಕಳ್ಳತನ ಮಾಡಿ ಸಂಗ್ರಹಿಸುವರು. ಇನ್ನು ಕೆಲವು ಕಡೆಗಳಲ್ಲಿ ಯಾವುದಾದರೂ ಒಂದು ದೊಡ್ಡ ಗಿಡವನ್ನು ಕಡಿದು ವಾಹನದ ಮೂಲಕ ತಂದು ಸಂಗ್ರಹಿಸುತ್ತಾರೆ.
ಜಾನಪದ ಶೈಲಿಯ ಹಾಡುಗಳು: ಹೋಳಿ ಹುಣ್ಣಿಮೆ ರಾತ್ರಿಯಲ್ಲಿ ಕಾಮನ ಮೂರ್ತಿ ಮುಂದೆ ಎರಡು ಅಥವಾ ಮೂರು ತಂಡಗಳಾಗಿ ಹಾಡುವ ಜಾನಪದ ಶೈಲಿಯ ಹಾಡುಗಳು ಅರ್ಥ ಗರ್ಭಿತವಾಗಿರುತ್ತವೆ. ಒಂದು ತಂಡದವರ ಪದಕ್ಕೆ ಮತ್ತೊಂದು ತಂಡವು ಆ ಪದಕ್ಕೆ ಹೊಂದುವ ಹೋಳಿ ಪದವನ್ನು ಹಾಡಬೇಕು. ಈ ರೀತಿ ಸ್ಫರ್ಧಾತ್ಮಕವಾಗಿ ಹಾಡುವ ಜಾನಪದ ಶೈಲಿಯ ಹಾಡುಗಳನ್ನು ಕೇಳಲು ಜನತೆ ತಂಡೋಪ ತಂಡವಾಗಿ ಬಂದು ಸೇರುವುದು ವಿಶೇಷ. ಹಿಂದೂ ಧರ್ಮದ ಸಂಪ್ರದಾಯದಂತೆ ವರ್ಷದಲ್ಲಿ ಹಲವಾರು ಹಬ್ಬಗಳು ಬರುತ್ತವೆ. ಆದರೆ, ವಿಶೇಷವಾಗಿ ಈ ಹೋಳಿ ಹುಣ್ಣಿಮೆ ಹಬ್ಬಕ್ಕೆ ಎಲ್ಲರ ಮನೆಯಲ್ಲಿ ಹೋಳಿಗೆ ಭೋಜನ ಮಾಡುವುದು ವಿಶೇಷ.
ಬರದ ಛಾಯೆ: ಹಿಂದೂ ಧರ್ಮದ ಸಂಪ್ರದಾಯದಂತೆ ಹೋಳಿ ಹಬ್ಬದಲ್ಲಿ ಹೆಚ್ಚು ಪುರುಷರ ಆಚರಣೆಗೆ ಸೀಮಿತವಾಗಿದ್ದರಿಂದ ಈ ಹಬ್ಬವನ್ನು ಕಾಮ ದಹನವಾದ ದಿನ ವಿವಿಧ ರೀತಿಯ ಬಣ್ಣಗಳನ್ನು ಖರೀಧಿಸಿ ಸ್ನೇಹಿತರು ಸೇರಿದಂತೆ ಸಾರ್ವಜನಿಕರಿಗೆ ಬಣ್ಣ ಎರಚಿ ಸಂಭ್ರಮಿಸುವರು. ಆದರೆ ಈ ವರ್ಷ ಭೀಕರ ಬರಗಾಲದಿಂದ ರೈತ ಸಮುದಾಯ ಹಾಗೂ ಕೂಲಿ ಕಾರ್ಮಿಕರು ಹಬ್ಬಗಳು ಬಂದರೆ ಚಿಂತೆಗೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳು ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ಜೀವನ ಸಾಗಿಸಲು ಪರದಾಡುವಂತಾಗಿದೆ. ಇದರ ಮಧ್ಯೆಯೂ ಜನತೆ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುತ್ತಿರುವುದನ್ನು ನೋಡಿದರೆ ನಮ್ಮ ಜನ ಹಬ್ಬಗಳಿಗೆ ಎಷ್ಟೊಂದು ಪ್ರಾಮುಖ್ಯ ನೀಡುತ್ತಾರೆ ಎನ್ನುವುದು ತಿಳಿಯುತ್ತದೆ.
- ಎಸ್.ಜಿ. ತೆಗ್ಗಿನಮನಿ