ನೀತಿ ಸಂಹಿತೆ ಕುರಿತು ಸಭೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 28
ಚುನಾವಣಾ ಆಯೋಗದ ಆದೇಶದಂತೆ ಮಾ. 20ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಅನುಸರಿಸುವ ಬಗ್ಗೆ ರಿಟರ್ನಿಂಗ್ ಅಧಿಕಾರಿಗಳಿಗೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಾಗೂ ಚುನಾವಣಾ ಸಿಬ್ಬಂದಿಗೆ ಬುಧವಾರ ಜಿಪಂ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಸಭೆ ಜರುಗಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿರುವ ಜನ ಪ್ರತಿನಿಧಿಗಳ ಫ್ಲೆಕ್ಸ್ ಬೋರ್ಡ್ಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ನೀತಿ ಸಂಹಿತೆ ಜಾರಿಯಾದ ದಿನದಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಇಲಾಖೆಗಳು ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ಹೊಸ ಟೆಂಡರ್ಗಳನ್ನು ಮಾಡುವಂತಿಲ್ಲ. ಹೊಸ ಪಡಿತರ ಚೀಟಿಗಳನ್ನು ಹಂಚುವಂತಿಲ್ಲ. ಪ್ರತಿಯೊಬ್ಬ ಚುನಾವಣಾಧಿಕಾರಿ, ಸೆಕ್ಟರ್ ಆಫೀಸರ್, ವಿಡಿಯೋ ಸರ್ವಲೆನ್ಸ್ ಹಾಗೂ ಲೆಕ್ಕ ಪರಿಶೀಲನಾಧಿಕಾರಿಗಳು ಕಾನೂನು ಜ್ಞಾನ ಹೊಂದಿದ್ದು ಸರ್ಕಾರದ ಎಲ್ಲ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯನ್ನು ತಪ್ಪದೇ ಪಾಲಿಸಬೇಕು. ಜಿಲ್ಲಾ ಮಟ್ಟದ ಪ್ರತಿಯೊಬ್ಬ ಅಧಿಕಾರಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು.
ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಎಪಿಎಂಸಿಯವರು ನಿರೀಕ್ಷಣಾ ಮಂದಿರಗಳನ್ನು ಚುನಾವಣಾಧಿಕಾರಿಗಳಿಗೆ ಒದಗಿಸಲು ಸುಸ್ಥಿತಿಯಲ್ಲಿ ಇಡಬೇಕು. ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸಲು ವಿವಿಧ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿ ರಚಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಿಸಿರುವುದು ವಿಶೇಷವಾಗಿದ್ದು, ಈ ತಂಡವು ಸಭೆ ಸಮಾರಂಭ ನಡೆದ ಸಂದರ್ಭದಲ್ಲಿ ಅನುಮತಿ ಇಲ್ಲದೆ ವಾಹನ ಓಡಾಟ , ಹಣ ಹಂಚಿಕೆ, ಊಟ, ತಿಂಡಿ ಹಂಚಿಕೆ ಇವೆಲ್ಲವುಗಳನ್ನು ಅನಧಿಕೃತವಾಗಿ ಮಾಡಿರುವುದು ಕಂಡು ಬಂದಲ್ಲಿ ಪರಿಶೀಲಿಸಿ, ವಿಡಿಯೋಗ್ರಾಫಿ ಮಾಡಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಮಾತನಾಡಿ, ಬೆದರಿಕೆ ದೂರುಗಳು, ಚುನಾವಣಾ ವೆಚ್ಚದ ಬಗ್ಗೆ ದೂರುಗಳು, ಮದ್ಯ ಮಾರಾಟ ಇವೆಲ್ಲವುಗಳ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಗಳು ಪರಿಶೀಲಿಸಬೇಕು ಎಂದರು. ಸಭೆಯನ್ನು ಉದ್ದೇಶಿಸಿ ಜಿಪಂ ಸಿಇಓ ವೀರಣ್ಣ ತುರಮರಿ ಮಾತನಾಡಿ, ಪ್ರತಿನಿಧಿಗಳು ಚುನಾವಣಾ ಸಂಬಂಧಿ ಖರ್ಚು ವೆಚ್ಚಕ್ಕೆ ಬ್ಯಾಂಕ್ ಖಾತೆ ತೆಗೆಯಬೇಕು ಹಾಗೂ ಅದರ ಮೂಲಕವೇ ಹಣ ಡ್ರಾ ಮಾಡಿಕೊಳ್ಳಬೇಕು ಮತ್ತು ವೋಚರ್ಗಳನ್ನು ಕ್ರೂಢೀಕರಿಸಿ ಅದನ್ನು ಚುನಾವಣಾಧಿಕಾರಿಗಳಿಗೆ ಒದಗಿಸುವ ರೆಜಿಸ್ಟರ್ಗಳಲ್ಲಿ ನಮೂದಿಸಬೇಕು. ಹಾಗೂ ವೆಚ್ಚದ ಮಿತಿ ರು. 16 ಲಕ್ಷ ದಾಟುವಂತಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಜಿಪಂ ಉಪಕಾರ್ಯದರ್ಶಿಉಮೇಶ, ಯೋಜನಾ ನಿರ್ದೇಶಕ ದಿನೇಶ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಎಚ್.ಎಸ್. ನಾಗರಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.