ಸಂಭ್ರಮದ ಹೋಳಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 28
ಜಿಲ್ಲೆಯ ವಿವಿಧೆಡೆ ಗುರುವಾರ ರಂಗು ರಂಗಿನ ಹೋಳಿ ಹಬ್ಬವನ್ನು ಜನತೆ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮ, ಸಡಗರದಿಂದ ಆಚರಿಸಿದರು.
ರೋಣ ತಾಲೂಕಿನ ಹಲವಾರು ಗ್ರಾಮಗಳು, ಗದಗ ಹಾಗೂ ನರಗುಂದ ತಾಲೂಕುಗಳಲ್ಲಿ ಜನತೆ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಹೋಳಿ ಹಬ್ಬ ಗಂಡು ಮಕ್ಕಳ ಹಬ್ಬವಾಗಿ ವಿಶೇಷತೆ ಪಡೆದಿದೆ. ಹೋಳಿ ಹಬ್ಬದ ಆಚರಣೆಗೆ ಬಿಸಿಲಿನ ಪ್ರತಾಪ ಹೊರತು ಪಡಿಸಿದಲ್ಲಿ, ಇನ್ನಾವುದೇ ಅಡೆ ತಡೆಗಳಿಲ್ಲದೆ ಗದಗ-ಬೆಟಗೇರಿ ಅವಳಿ ನಗರವನ್ನು ಬಿಟ್ಟು ಜಿಲ್ಲೆಯಾದ್ಯಂತ ಹೊಳಿ ಸಂಭ್ರಮ ಮನೆ ಮಾಡಿತ್ತು.
ಬುಧವಾರ ಸಂಜೆಯಿಂದಲೇ ಹೋಳಿ ಹುಣ್ಣಿಮೆ ಆಚರಣೆ ಪ್ರಾರಂಭವಾಗಿತ್ತು. ಗ್ರಾಮದ ಹಲವು ಕಡೆಗಳಲ್ಲಿ ಕಾಮ-ರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಗ್ರಾಮದ ಕಲ್ಲಪ್ಪಜ್ಜನ ಗುಡಿ ಹಾಗೂ ರಮಾಣಿಯವರ ಓಣಿಯಲ್ಲಿ ಹಲವು ವರ್ಷಗಳಿಂದ ಪ್ರತಿಷ್ಠಾಪಿಸಲಾದ ಕಾಮ-ರತಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಾತ್ರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಾಮದ ಹರಿಜನ ಕೇರಿಯಲ್ಲಿನ ಸಾರ್ವಜನಿಕರು ಹಾಗೂ ಗ್ರಾಮಸ್ಥರೆಲ್ಲರೂ ಕೂಡಿ ಗ್ರಾಮದಲ್ಲಿರುವ ಎಲ್ಲ ಕಾಮ-ರತಿಯರಿಗೆ ನಿಧನ ಹೊಂದಿದವರಿಗೆ ಸಲ್ಲಿಸುವ ಪ್ರಾರ್ಥನೆ ಹಾಗೂ ಹಲಗೆ ಬಾರಿಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಗ್ರಾಮದ ಮುಖ್ಯ ಸ್ಥಳವಾಗಿರುವ ಶಬಾರ ಕಟ್ಟೆಯ ಬಳಿ ಬೆಳಗ್ಗೆ 5 ಗಂಟೆಯಿಂದಲೇ ಪ್ರಾರಂಭಗೊಂಡ ಕಾಮಧಹನ ಕಾರ್ಯಕ್ರಮವು ಮಧ್ಯಾಹ್ನದವರೆಗೆ ಜರುಗಿತು. 9 ಗಂಟೆಯಿಂದಲೇ ಆರಂಭಗೊಂಡ ಕಾಮ-ರತಿ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಾಯಿತು. ಮಾಜಿ ಸೈನಿಕ ಎಂ.ಜಿ. ಪಾಟೀಲ, ಗ್ರಾಪಂ ಸದಸ್ಯ ಮುಡಿಯಪ್ಪ ಶಿಂಗ್ಟಾಲಕೇರಿ, ಯಲ್ಲಪ್ಪ ಗೆಜ್ಜಿ, ಶರಣಪ್ಪ ಮ್ಯಾಗೇರಿ, ದಾವಲ್ ಅತ್ತಾರ, ವಿನಾಯಕ, ಮಹೇಶ ಸಂಕನಗೌಡ್ರ, ಸತೀಶ ಕಿತ್ತೂರ, ಶರಣಪ್ಪ ಬ್ಯಾಹಟ್ಟಿ, ವೀರೇಶ ಬ್ಯಾಹಟ್ಟಿ, ಜಗದೀಶ ಹಡಪದ, ಶರಣಪ್ಪ ಗೋದಿ, ಬಸಯ್ಯ ಬೂಸನೂರಮಠ, ಬಾಪುಗೌಡ ಪಿಡ್ಡನಗೌಡ್ರ, ಶರಣಪ್ಪ ಕಿತ್ತೂರ, ಶರಣಪ್ಪ ಕರಡಿ, ಆನಂದ ವಡ್ಡರ, ಈಶ್ವರ ಹಕ್ಕಿ, ಮಹಾಂತೇಶ ಭೂಸನೂರಮಠ ಮುಂತಾದವರು ಪಾಲ್ಗೊಂಡಿದ್ದರು.
ಗುಂಡಿನ ಗಮ್ಮತ್ತು ಜೋರು: ಹೋಳಿ ಹುಣ್ಣಿಮೆಯು ಕೇವಲ ಬಣ್ಣಗಳಿಂದ ಮಾತ್ರವಲ್ಲ, ಅದರೊಟ್ಟಿಗೆ ಗುಂಡಿನ ಗಮ್ಮತ್ತು ಬಲು ಜೋರಾಗಿತ್ತು. ಗ್ರಾಮೀಣ ಪ್ರದೇಶಗಳು ಸೇರಿದಂತೆ ಹಲವೆಡೆ ಹೋಳಿ ಹಬ್ಬದ ಅಂಗವಾಗಿ ಎಲ್ಲ ಮದ್ಯದ ಅಂಗಡಿಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಕೆಲವರು ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದರಿಂದ ನಶೆ ಏರಿಸಿಕೊಂಡೇ ಹಬ್ಬದಲ್ಲಿ ತೊಡಗಿದ್ದು ಕಂಡುಬಂತು.
ಗಮನ ಸೆಳೆದ ಹಾಡು: ಹೋಳಿ ಹುಣ್ಣಿಮೆಯಲ್ಲಿ ಗ್ರಾಮೀಣ ಶೈಲಿಯ ವಿಶೇಷ ಹಾಡುಗಳಿಗೆ ಎಲ್ಲಿಲ್ಲದ ಮಹತ್ವ. ಸುಗ್ಗಿಯ ಕಾಲವನ್ನು ಪೂರ್ಣಗೊಳಿಸಿರುವ ರೈತ ಸಮುದಾಯ ಈ ಹಬ್ಬದ ಸಂದರ್ಭದಲ್ಲಿ ತಮ್ಮಲ್ಲಿರುವ ಜನಪದ ಶೈಲಿಯ ಪದಗಳನ್ನು ಅತ್ಯಂತ ಏರು ಧ್ವನಿಯಲ್ಲಿ ಹಾಡುವ ಮೂಲಕ, ಬಣ್ಣ ಆಡಲು ಬರುವ ಇನ್ನೊಂದು ತಂಡಕ್ಕೆ ಹಾಡಿನ ಮೂಲಕವೇ ಸವಾಲು ಹಾಕುತ್ತಾರೆ. ಇದಕ್ಕೆ ಎದುರಾಗುವ ಇನ್ನೊಂದು ತಂಡವೂ ಇವರಿಗೆ ಹಾಡಿನ ಮೂಲಕವೇ ಉತ್ತರಿಸಬೇಕು. ಹಾಡು ಹಾಡದೇ ಹೋದಲ್ಲಿ ಅವರು ಸೋತಂತೆ, ಅದಕ್ಕೆ ಅವರಿಗೆ ನೀಡುವ ಶಿಕ್ಷೆ ಮತ್ತಷ್ಟು ಬಣ್ಣ ಹಾಕಿ ಖುಷಿಪಡುತ್ತಾರೆ.