ರೋಣ ಬಳಿ ಟ್ರ್ಯಾಕ್ಸ್ ಪಲ್ಟಿ:ನಾಲ್ವರಿಗೆ ತೀವ್ರ ಗಾಯ
ರೋಣ: ತಾಲೂಕಿನ ಬಾಸಲಾಪುರ ಕ್ರಾಸ್ ಬಳಿ ಟ್ರ್ಯಾಕ್ಸ್ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ 8 ಜನರ ಪೈಕಿ 2 ವರ್ಷದ ಮಗು ಸೇರಿ ನಾಲ್ವರು ತೀವ್ರ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಸಿಂಧನೂರು ತಾಲೂಕಿನ ಗುಂಡಾ ಗ್ರಾಮದಿಂದ ಟ್ರ್ಯಾಕ್ಸ್,ನಲ್ಲಿ ನವಲಗುಂದ ತಾಲೂಕಿನ ಯಮನೂರಿನಲ್ಲಿ ನಡೆಯುವ ಉರೂಸಿಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಸ್ ರಸ್ತೆಯ ಮಗ್ಗಲಿನ ಸರುವಿಗೆ (ತೆಗ್ಗು) ಉರುಳಿ ಬಿದ್ದಿದೆ. ಗಾಯಗೊಂಡವರನ್ನು ಆರೋಗ್ಯ ರಕ್ಷಾ ಅಂಬ್ಯುಲೆನ್ಸ್ (108) ಮೂಲಕ ಪಟ್ಟಣದ ಪಂ. ಡಾ, ಭೀಮಸೇನ ಜೋಶಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಗಾಯಗೊಂಡವರನ್ನು ಹನುಮಂತಮ್ಮ ದಾಸರ (58), ಅಕ್ಬರಸಾಬ ಪಿಂಜಾರ (34), ಯಮನೂರಪ್ಪ ನಾಯ್ಕರ (ಕಲ್ಮಂಗಿ) (35) ಮತ್ತು ರುಕ್ಷಾನಾ ಪಿಂಜಾರ (2) ಎಂದು ಗುರುತಿಸಲಾಗಿದೆ.