ಕನ್ನಡ ಭಾಷೆ ಉಸಿರಾಗಲಿ
ಶಿರಹಟ್ಟಿ: ಕನ್ನಡವನ್ನು ಕೇವಲ ಭಾಷೆ ಎಂದು ಪ್ರೀತಿಸದೆ ಉಸಿರೆಂದು ಭಾವಿಸಿದಲ್ಲಿ ಕನ್ನಡತನವನ್ನು ಮೆರೆಸಲು ಸಾಧ್ಯ ಎಂದು ಪ್ರಾಚಾರ್ಯ ವಿ.ಪಿ. ಸಮೋರೆಕರ ಹೇಳಿದರು.
ಶನಿವಾರ ಪಟ್ಟಣದ ಫಕೀರೇಶ್ವರ ಸರ್ಕಾರಿ ಮಹಾವಿದ್ಯಾಲಯ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ತಿನ ಆಶ್ರಯದಲ್ಲಿ ನಡೆದ ಕನ್ನಡ ನುಡಿಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಹಾಗೂ ಈ ನಾಡಿನ ಸಂಸ್ಕೃತಿಗಳೆರಡೂ ನಮ್ಮ ಉಸಿರಾಗಬೇಕಾಗಿದೆ. ಕನ್ನಡದ ಹಿರಿಮೆ ಗರಿಮೆ ಕಾಪಾಡಬೇಕು ಎಂದರು.
ತುಟಿಯ ಮೇಲಿನ ಸಹಾನುಭೂತಿ ಅಥವಾ ಅನುಕಂಪದಿಂದ ಕನ್ನಡ ಭಾಷೆ ಬೆಳೆಯುವುದಿಲ್ಲ. ಬಳಕೆಯಿಂದ ಮಾತ್ರ ಬೆಳೆಯುತ್ತದೆ. ಜಾಗತೀಕರಣ ಹಾಗೂ ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡ ಕಳೆದು ಹೋಗದಂತೆ ನೋಡಿಕೊಳ್ಳುವುದು ಇಂದಿನ ಅಗತ್ಯ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಹೋರಾಟಗಾರರು ತ್ಯಾಗ ಬಲಿದಾನದಿಂದ ಒಂದುಗೂಡಿಸಿದ್ದು, ಈ ಸ್ವಾಭಿಮಾನ ಎಲ್ಲ ಕನ್ನಡಿಗರಲ್ಲಿ ಬೆಳೆಯಬೇಕು ಎಂದರು.
ಶಿಕ್ಷಕ ಎಚ್.ಆರ್. ಕಲ್ಮನಿ ಮಾತನಾಡಿ, ಕನ್ನಡ ನಾಡಿನ ಏಕತೆ, ಸಂಸ್ಕೃತಿ, ಪರಂಪರೆ ರಕ್ಷಣೆ ನಮ್ಮೆಲ್ಲರ ಹೊಣೆ. ಕನ್ನಡಾಭಿಮಾನ ರೂಢಿಸಿಕೊಂಡು ನಾಡಿನ ಏಳ್ಗೆಗೆ ಸಿದ್ಧರಾಗಬೇಕು.ಕಾಲ ಬದಲಾದಂತೆ ಮನುಷ್ಯನ ಭಾವನೆಗಳು ಬದಲಾಗಿ ಕನ್ನಡದ ಉಳಿವಿಗೆ ಧಕ್ಕೆ ಬರುತ್ತಿದೆ ಎಂದು ವಿಷಾದಿಸಿದರು. ಕನ್ನಡವನ್ನು ಪ್ರೀತಿಸುವ ಜತೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಉಳಿವಿಗಾಗಿ ಹೋರಾಟಗಾರರ ಆದರ್ಶದಲ್ಲಿ ಬದುಕೋಣ ಎಂದರು.
ಉಪನ್ಯಾಸಕಿ ಅನುಪಮಾ ಭಾತಖಂಡೆ, ಬಿ.ಎಸ್. ಪಾಟೀಲ, ಹರ್ಲಾಪುರ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಎ. ಡಾಲಾಯತ ಸ್ವಾಗತಿಸಿದರು. ಜಿ.ವೈ. ಶೆಟ್ರಡ್ಡಿ ನಿರೂಪಿಸಿದರು. ಎಂ.ಸಿ. ಸ್ವಾಮಿ ವಂದಿಸಿದರು.