ಪರೀಕ್ಷೆ ಸಿದ್ಧತೆ ಪೂರ್ಣ: ಪಾಟೀಲ
ನರಗುಂದ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಏಪ್ರಿಲ್ 1ರಿಂದ 10ರ ವರೆಗೆ ನಡೆಯುತ್ತಿದ್ದು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 6 ಕೇಂದ್ರಗಳಲ್ಲಿ ಒಟ್ಟು 1,356 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ನವೋದಯ ಶಾಲೆ, ತಾಲೂಕಿನ ಶಿರೋಳ ಗ್ರಾಮದ ಗುರುಬಸವ ಪ್ರೌಢಶಾಲೆ, ಕೊಣ್ಣೂರಿನ ಕೆಇಎಸ್ ಪ್ರೌಢಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಪ್ರತಿಯೊಂದು ಕೇಂದ್ರದಲ್ಲೂ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಅಧಿಕಾರಿ ವೀಕ್ಷಕರಾಗಿ ಕಾರ್ಯ ನಿರ್ವಹಿಸುವರು. ಜಿಲ್ಲೆ ಹಾಗೂ ತಾಲೂಕಿನಲ್ಲಿ ಒಟ್ಟು 6 ವೀಕ್ಷಕ ತಂಡಗಳು ದಿನನಿತ್ಯ ಸಂಚರಿಸುವ ಮೂಲಕ ನಕಲು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದರು.