ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಸಿಲಿಗೆ ತತ್ತರಿಸಿದ ಕುರಿ, ಕುರಿಗಾರರು

Rashmi Kasaragodu
Updated On : 31 Mar 2013, 11:58 am

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 30
ಪ್ರಸಕ್ತ ಬೇಸಿಗೆ ಬಿಸಿಲಿನಿಂದ ಸಾರ್ವಜನಿಕರು ತತ್ತರಿಸುವಂತಾಗಿದ್ದು, ಇದರೊಂದಿಗೆ ವರ್ಷದ 12 ತಿಂಗಳು ಅಡವಿಯಲ್ಲಿ ವಾಸಿಸುವ ಕುರಿಗಳಿಗೂ ಕುಡಿಯಲು ನೀರಿಲ್ಲ. ಇದರಿಂದಾಗಿ ಬೇಸಿಗೆ ಎದುರಿಸುವುದು ಕುರಿಗಾರರಿಗೆ ಕಡು ಸಂಕಷ್ಟವಾಗಿ ಪರಣಮಿಸಿದೆ.
ಕುರಿಗಾರರ ಬದುಕು ಕ್ಲಿಷ್ಟಕರವಾಗಿದ್ದು, ಸರ್ಕಾರದ ಯಾವ ಯೋಜನೆಗಳು ಇವರ ಹತ್ತಿರ ಸುಳಿಯುವುದಿಲ್ಲ. ಕುರಿಗಾರರ ವ್ಯಾಪ್ತಿಗೆ ಒಳಪಡುವುದಿಲ್ಲ. ತಮ್ಮ ಸಂಸಾರ ಕಟ್ಟಿಕೊಂಡು ಕಾಲ್ನಡಿಗೆಯಿಂದ ಪ್ರತಿನಿತ್ಯ ಸಂಚರಿಸುತ್ತಾ ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ. ಯಾವುದೇ ಸರ್ಕಾರಗಳು ಕುರಿಗಾರರ ಹಿತಾಭಿವೃದ್ಧಿ ಸಾಧಿಸುವಲ್ಲಿ ಕೇವಲ ಮೊಸಳೆ ಕಣ್ಣೀರು ಇಟ್ಟಿದ್ದಾರೆ ಹೊರತು ಸಮುದಾಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಾಪಿಸಲಾಗಿರುವ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಅದಕ್ಕೆ ಹೆಚ್ಚಿನ ಅನುದಾನವಿಲ್ಲದೆ ಹಲ್ಲುಕಿತ್ತ ಹಾವಿನಂತಿರುವ ಮಂಡಳಿಯಿಂದ ಇಲ್ಲಿಯವರೆಗೂ ತಮಗೆ ಅನುಕೂಲವಾಗಿಲ್ಲ ಎನ್ನುವುದು ಕುರಿಗಾರರ ಅಳಲು.
ಎಲ್ಲಿಯೂ ನೀರಿಲ್ಲ: ಜಿಲ್ಲೆಯ 5 ತಾಲೂಕಿನ ವ್ಯಾಪ್ತಿಯಲ್ಲಿ (ಜಿಪಂ ಇಲಾಖೆ ಆಧಾರದಲ್ಲಿ) 457ಕ್ಕೂ ಹೆಚ್ಚು ಕೆರೆಗಳಿವೆ. ಇನ್ನು ಕುರಿಗಾರರು ಆಶ್ರಯಿಸಿರುವುದು ರೈತರ ಜಮೀನುಗಳಲ್ಲಿರುವ ಸಾವಿರಾರು ಕೆರೆಗಳನ್ನು. ಆದರೆ, ಡಿಸೆಂಬರ್ ಮೊದಲ ವಾರದಲ್ಲಿಯೇ ರೈತರ ಜಮೀನಿನಲ್ಲಿನ ಕೆರೆಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಅಂದಿನಿಂದ ಇಂದಿನವರೆಗೂ ಕುರಿಗಾರರು ಹಗಲು ಹೊಲಗಳಲ್ಲಿ ಕುರಿಗಳನ್ನು ಮೇಯಿಸಿ ರಾತ್ರಿ ಊರಿಗೆ ಬಂದು ನೀರು ಕುಡಿಸುವಂತಾಗಿದ್ದು, ಗ್ರಾಮಗಳಲ್ಲಿಯೂ ಸಮರ್ಪಕ ವಿದ್ಯುತ್ ಇಲ್ಲದ್ದರಿಂದ ಕುರಿಗಳಿಗೆ ನೀರು ಲಭ್ಯವಾಗುತ್ತಿಲ್ಲ.
ಬಿಸಿಲಿನಿಂದ ಹಲವಾರು ಸಮಸ್ಯೆ: ಗದಗ ಜಿಲ್ಲೆಯಲ್ಲಿ ವಾರದಿಂದ ಕಂಡುಬರುತ್ತಿರುವ ಅತಿಯಾದ ಬಿಸಿಲಿನಿಂದ ಕುರಿಗಾರರು, ಜಾನುವಾರುಗಳಿಗೆ ಸರಿಯಾದ ನೀರು ಸಿಗದೇ ಕಂಗಾಲಾಗಿದ್ದು, ಬಿಲಿಸಿನ ಪ್ರಖರತೆ ಹೆಚ್ಚಾಗಿದ್ದರಿಂದ ಕುರಿಗಳಿಗೆ ಹಲವಾರು ಕಾಯಿಲೆಗಳು ಕಾಣಿಸಿಕೊಂಡಿದ್ದು (ಕಾಲು ಬೇನೆ, ಅತಿಯಾದ ಜ್ವರ, ಕುರಿಗಳಲ್ಲಿಯೂ ಅತಿಸಾರದ ಭೇದಿ) ಇದರಿಂದಾಗಿ ಕುರಿಗಳು ಮುಂದೆ ನಡೆದು ಹೋಗದಂತೆ ವರ್ತಿಸುತ್ತಿವೆ. ಕಾಯಿಲೆಯಿಂದಾಗಿ ಕೆಲ ಕುರಿಗಳನ್ನು ಮನೆಯಲ್ಲಿ (ದೊಡ್ಡಿ) ಬಿಟ್ಟು ಹೋಗುವಂತಾಗಿದೆ ಎಂದು ಕುರಿಗಾರರು ಕಷ್ಟ ತೋಡಿಕೊಂಡರು.


 ಏರಿಕೆಯಾಗುತ್ತಿರುವ ಉಷ್ಣಾಂಶ
ಗದಗ ಜಿಲ್ಲೆಯಲ್ಲಿ ಕಳೆದ ವಾರ 35 ಡಿಗ್ರಿಂ ಉಷ್ಣಾಂಶದಿಂದ ಪ್ರಾರಂಭವಾಗಿದ್ದು, ಗುರುವಾರ 37, ಶುಕ್ರವಾರ 38 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಏಪ್ರಿಲ್ ಮೊದಲ ವಾರ 40ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಜಿಲ್ಲಾ ಹವಾಮಾನ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶ ಕೊರತೆ ಉಂಟಾಗಿದ್ದು, ಸಹಜವಾಗಿ ಪ್ರಸಕ್ತ ವರ್ಷ ಉಷ್ಣಾಂಶ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
 ಅಡವಿ ಮಕ್ಕಳು ಅತಂತ್ರ
ಕುರಿಗಾರರನ್ನು ಗ್ರಾಮೀಣ ಭಾಗದಲ್ಲಿ ಅಡವಿ ಮಕ್ಕಳೆಂದೇ ಗುರುತಿಸಲಾಗುತ್ತದೆ. ಕುರಿಗಾರರು ಜೀವನವೆಲ್ಲಾ ಊರುಗಳಿಂದ ಹೊರಗೆ ಕಳೆಯುತ್ತಾರೆ. ಕುರಿಗಳನ್ನು ಮೇಯಿಸುತ್ತಾ ಹೋದಲೆಲ್ಲಾ ರಾತ್ರಿ ವಾಸ್ತವ್ಯ ಹೂಡಿ ಮತ್ತೆ ಮುಂದೆ ಕುರಿ ಮೇಯಿಸಲು ಹೋಗುವುದು ವಾಡಿಕೆ. ಆದರೆ, ಮಳೆರಾಯನ ಮುನಿಸಿನಿಂದ ಇಂದು ಕುರಿಗಾರರು ನೀರಿಗಾಗಿ ಪ್ರತಿನಿತ್ಯ ಗ್ರಾಮಗಳಿಗೆ ಬರುವಂತಾಗಿದ್ದು, ಬರಗಾಲ ಹಿನ್ನೆಲೆಯಲ್ಲಿ ಕುರಿಗಳಿಗೆ ನೀರು ಇಲ್ಲ. ಮೇಯಿಸಲು ಸಮರ್ಪಕ ಆಹಾರ ಸಿಗುತ್ತಿಲ್ಲ. ಇದರಿಂದಾಗಿ ಅಡವಿ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement