ಸಾರ್ವಜನಿಕರಲ್ಲಿ ಇ-ಬ್ಯಾಂಕಿಂಗ್ ಜಾಗೃತಿ ಅವಶ್ಯ
ಗದಗ: ಪರಿಸರ ಸ್ನೇಹಿಯಾಗಿರುವ ಇ-ಬ್ಯಾಂಕಿಂಗ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕವಿವಿಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಜಿ. ಹುಂಡೇಕರ ಹೇಳಿದರು.
ಅವರು ಶನಿವಾರ ನಗರದ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್ಎಸ್ ಮಹಾವಿದ್ಯಾಲಯದಲ್ಲಿ ಭಾರತದಲ್ಲಿ ವಿದ್ಯುನ್ಮಾನ ಬ್ಯಾಂಕಿಂಗ್ನ ಸವಾಲುಗಳು, ತಂತ್ರಗಳು ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಇ-ಬ್ಯಾಂಕಿಂಗ್ ಸೇವೆ ಜನಸ್ನೇಹಿ, ಪರಿಸರ ಸ್ನೇಹಿಯಾಗಿದ್ದು, ನಾವು ಕಳಿಸುವ ಸಂದೇಶಗಳು ಕ್ಷಣಾರ್ಧದಲ್ಲಿ ತಲುಪುವ ವ್ಯವಸ್ಥೆ ಇ-ಬ್ಯಾಂಕಿಂಗ್ನಲ್ಲಿದೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅವ್ಯವಹಾರವನ್ನು ತಡೆಯುವ ಉದ್ದೇಶವನ್ನಿಟ್ಟುಕೊಂಡು ಇ-ಬ್ಯಾಂಕಿಂಗ್ ಜಾರಿಯಾಗಿದೆ. ಯಾವುದೇ ವ್ಯಕ್ತಿ ಬ್ಯಾಂಕ್ನಲ್ಲಿ ಖಾತೆ ತೆರೆದಲ್ಲಿ ಅವನಿಗೆ ಪ್ರತ್ಯೇಕವಾದ ಖಾತೆಗೆ ಸಂಬಂಧಿಸಿದ ಕ್ರಮಸಂಖ್ಯೆ ನೀಡಲಾಗುತ್ತದೆ. ಇದು ಅವನ ವೈಯಕ್ತಿಕ ಬ್ಯಾಂಕಿಂಗ್ ಸೇವೆಗೆ ಸಹಕಾರಿಯಾಗಲಿದೆ. ಇನ್ನು ದೊಡ್ಡ ಪ್ರಮಾಣದ ಹಣವನ್ನು ಎಲ್ಲಂದರಲ್ಲಿ ತರುವುದು ಅಸಾಧ್ಯದ ಮಾತು ಹಾಗಾಗಿ ಕ್ರೆಡಿಟ್ ಕಾರ್ಡ ರಚಿಸಲಾಗಿದ್ದು, ಇದು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಎಟಿಎಂ ಮೂಲಕ ಹಾಗೂ ಇಲ್ಲಿರುವ ಸ್ಥಳೀಯ ಶಾಖೆಗಳಲ್ಲಿ ಹಣ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಅಧ್ಯಕ್ಷತೆ ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹಾಗೂ ಉದ್ಘಾಟನೆ ನೆರವೇರಿಸಿದ ಜಿಪಂನ ಮಾಜಿ ಅಧ್ಯಕ್ಷೆ ಶಕುಂತಲಾ ದಂಡಿನ ಮಾತನಾಡಿದರು. ಈ ಸಂದರ್ಭಧಲ್ಲಿ ಜಯದೇವ ಮೆಣಸಗಿ, ಎ.ಎಸ್. ಸೊಲ್ಲಾಪುರ ಇದ್ದರು. ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಕೆಎಸ್ಎಸ್ ಕಾಲೇಜಿನ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಸ್ವಾಗತಿಸಿದರು. ಪ್ರೊ. ರಾಧಾಕೃಷ್ಣ ಬಿ.ವಿ. ಹಾಗೂ ಡಾ. ಎಸ್.ಎನ್. ವೆಂಕಟಾಪೂರ ನಿರೂಪಿಸಿದರು. ಡಾ. ಟಿ.ಎನ್.ಗೋದಿ ವಂದಿಸಿದರು. ಈ ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ರಾಜ್ಯಗಳಿಂದ 40 ಕ್ಕೂ ಹೆಚ್ಚು ಪ್ರಬಂಧ ಮಂಡನಕಾರರು ಆಗಮಿಸಿದ್ದರು. ಹಾಗೂ ರಾಜ್ಯದ ವಿವಿಧ ಭಾಗಗಳಿಂದ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು.