ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 31
ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಹಿರೇವಡ್ಡಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ನಾಗರಾಜ ಕಾಟ್ರಹಳ್ಳಿ, ಉಮೇಶ ಅಂಕದ, ಜಗದೀಶ ಗೋವಿನಕೊಪ್ಪ, ಸುಭಾಷರೆಡ್ಡಿ ಹಳ್ಳಿಗುಡಿ, ಬಸವರೆಡ್ಡಿ ಜಕ್ಕರೆಡ್ಡಿ, ಬಸವರಾಜ ಅಂಕದ, ಮಾರುತಿ ಕುರಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಕರೆದುಕೊಂಡ ಹೋದ ಗ್ರಾಮಸ್ಥರು ಹಲವು ವರ್ಷಗಳಿಂದ ಅರಣ್ಯ ಇಲಾಖೆಯ ಒಟ್ಟು 44 ಎಕರೆ ಪ್ರದೇಶದ ಕೆಲವು ಭಾಗಗಳಲ್ಲಿ ಗಣಿ ಮಾಲೀಕ ಅಬ್ದುಲ್‌ರಹಿಮಾನ್ ಕಲಕೇರಿ ಎಂಬುವವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದ ಅವರು, ಈ ಕೂಡಲೇ ತಡೆಗಟ್ಟದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ನಿತ್ಯ ಕಲ್ಲುಗಳನ್ನು ತೆಗೆಯಲು ಕಲ್ಲು ಕ್ವಾರಿಯಲ್ಲಿ ಸ್ಫೋಟ ಮಾಡುತ್ತಿದ್ದು, ಯಾವುದೇ ಅನುಮತಿ ಪಡೆಯದೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಈ ಕುರಿತು ಅರಣ್ಯಾಧಿಕಾರಿ ವಿ.ಎಚ್. ಪರಿಮಳ ಅವರನ್ನು ಮಾತನಾಡಿಸಿದಾಗ, ಅರಣ್ಯ ಇಲಾಖೆಯ ಸರ್ವೇ ನಂ. 70 ಇದ್ದು, ಇದರಲ್ಲಿ ಅಲ್ಪಭಾಗ ಗಣಿ ಮಾಲೀಕರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಇದು ತಮ್ಮ ಗಮನಕ್ಕೆ ಬಂದ ಕೂಡಲೇ ಅರಣ್ಯ ಇಲಾಖೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಬಗ್ಗೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ದಂಡ ಕಟ್ಟಿಸಿಕೊಳ್ಳಬೇಕಾಗಿದೆ. ಅಲ್ಲದೆ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ 100 ಮೀಟರ್ ಬಿಟ್ಟು ಯಾವುದೇ ಕೆಲಸ ಮಾಡಬೇಕು ಎಂಬ ಕಾನೂನು ಇದೆ.
ತಮ್ಮ ಸ್ವಂತ ಜಮೀನಿನಲ್ಲಿ ಗಣಿಗಾರಿಕೆ ಮಾಡಿದರೂ 100 ಮೀಟರ್ ಬಿಟ್ಟು ಮಾಡಬೇಕು. ಆದರೆ ಇದರ ಉಲ್ಲಂಘನೆ ಗಣಿ ಮಾಲೀಕರಿಂದಾಗಿದ್ದು, ಇನ್ನು ಮುಂದೆ ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡದಂತೆ ಸ್ಥಳಕ್ಕೆ ಭೇಟಿ ನೀಡಿ ತಾಕೀತು ಮಾಡಲಾಗಿದೆ. ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಗಣಿ ಮಾಲೀಕರಿಗೆ ತಿಳಿಸಲಾಗಿದೆ. ಈ ಬಗ್ಗೆ ತಹಸೀಲ್ದಾರ್‌ಗೂ ಪತ್ರ ಬರೆಯಲಾಗುವುದು ಎಂದರು.