ಆಕಸ್ಮಿಕ ಬೆಂಕಿ: 5 ಬಣವೆ ಭಸ್ಮ
ರೋಣ: ಬೆಂಕಿ ಅನಾಹುತದಿಂದಾಗಿ ಹೊಟ್ಟು, ಮೇವಿನ 5 ಬಣವೆ ಮತ್ತು 1 ತೇಗದ ಕಟ್ಟಿಗೆಯ ಚಕ್ಕಡಿ ಭಸ್ಮವಾದ ಘಟನೆ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಜರುಗಿದೆ. ಬಣವೆಗಳಿಗೆ ಬೆಂಕಿ ತಗುಲಿ ಕೆನ್ನಾಲಿಗೆ ಚಾಚುತ್ತಿದ್ದನ್ನು ಮನೆಯ ಮಾಳಿಗೆ ಮೇಲೆ ಮಲಗಿದ್ದವರು ನೋಡಿ ಜನತೆಗೆ ತಿಳಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಅಗ್ನಿಶಾಮಕ ವಾಹನ ಕರೆಸಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ರು. 2 ಲಕ್ಷ ಹಾನಿ ಸಂಭವಿಸಿದೆ. ಗ್ರಾಮದ ಇಮಾಮಸಾಬ ಬೊದ್ಲೆಖಾನ ಎಂಬುವರ 2, ದಾವಲಸಾಬ ಹಾರುಗೇ ಎಂಬುವರ 1 ಹಾಗೂ ಕಮಲಸಾಬ ಕಾಲೆಖಾನ ಎಂಬುವರ 2 ಬಣವೆಗಳು ಮತ್ತು ಮುದಕಪ್ಪ ಮಿಸಿ ಎಂಬುವರ 1 ಚಕ್ಕಡಿ ಬೆಂಕಿಯಲ್ಲಿ ಭಸ್ಮವಾಗಿವೆ ಪ್ರತ್ಯಕ್ಷದರ್ಶಿ ಗ್ರಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ತಿಳಿಸಿದರು.
ಬೊಲೆರೋ ಪಲ್ಟಿ: 7 ಗಾಯ
ಗದಗ: ರಂಗ ಪಂಚಮಿ ಹಬ್ಬ ಮುಗಿಸಿಕೊಂಡು ಸ್ನಾನ ಮಾಡಲು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ತೆರಳುತ್ತಿದ್ದ ಬೊಲೆರೋ ವಾಹನದ ಟೈರ್ ಪಂಚರ್ ಆದರ ಪರಿಣಾಮ ರಸ್ತೆಯ ಬದಿಗೆ ಉರುಳಿಬಿದ್ದು, ಅದರಲ್ಲಿದ್ದ 7 ಜನರು ತೀವ್ರವಾಗಿ ಗಾಯಗೊಂಡ ಘಟನೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಬಳಿ ಜರುಗಿದೆ. ಅಮರರಾಂ ಚೌದರಿ, ದೀಪಾರಾಮ ಚೌದರಿ, ಬೋಲಾರಾಮ ಚೌದರಿ, ಬೀರಾರಾಂ ಚೌದರಿ, ಲಕ್ಷ್ಮಾರಾಮ ಚೌದರಿ, ಉಮಾರಾಮ ಚೌದರಿ ಮತ್ತಿತರರು ಗಾಯಗೊಂಡಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಜಲು ಹೋದ ಇಬ್ಬರ ಸಾವು
ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ಇರುವ ಶಿಂಗಟಾಲೂರು ಏತ ನೀರಾವರಿ ಯೋಜನೆಯ ಡ್ಯಾಮ್ ಹತ್ತಿರ ಭಾನುವಾರ ಮಧ್ಯಾಹ್ನ ಈಜಲು ಹೋಗಿದ್ದ ಗದಗ ನಗರದ ಮುಸ್ತಾಕ ಮೌಲಾಸಾಬ್ ಸುರಪುರ (16) ಹಾಗೂ ಹಾವೇರಿಯ ಕಾರ್ತಿಕ ವೀರಪ್ಪ ಕೊಟಗಿ (19) ಮೃತಪಟ್ಟಿದ್ದಾರೆ. ಗದಗನಲ್ಲಿ ಜರುಗಿದ ರಂಗಪಂಚಮಿ ಹಬ್ಬವನ್ನು ಮುಗಿಸಿ ಸ್ನಾನ ಮಾಡಲು ಜಲಾಶಯಕ್ಕೆ ಬಂದಿದ್ದರು. ಈಜಿ ಬಾರದೆ ಮುಳುಗಿ ಸಾವನ್ನಪಿದ್ದಾರೆ. ಸುದ್ದಿ ತಿಳಿದ ಮುಂಡರಗಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಬೆಂಕಿ: ರು. 1.35 ಲಕ್ಷ ಹಾನಿ
ಗದಗ: ಲಕ್ಷ್ಮೇಶ್ವರ ಪಟ್ಟಣ ಸಮೀಪದ ಹರದಿಗಟ್ಟಿ ಗ್ರಾಮದ ಹೊಲವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಬೆಳೆದು ನಿಂತಿದ್ದ ಹತ್ತಿ, ಮಾವು ಹಾಗೂ ಪ್ಲಾಸ್ಟಿಕ್ ಪೈಪ್ಗಳು ಆಹುತಿಯಾಗಿವೆ. ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಜಮೀಲಸಾಬ ಆಮದಸಾಬ ಸೂರಣಗಿ ಎಂಬುವರಿಗೆ ಈ ಹೊಲ ಸೇರಿದೆ. ಅಂದಾಜು ರು. 1.35 ಲಕ್ಷ ಹಾನಿ ಸಂಭವಿಸಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಸಾರಾಯಿ ವಶ
ಗದಗ: ನಗರದ ಚೇತನಾ ಕ್ರಾಸ್ ಹತ್ತಿರ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ರು. 7,281 ಮೌಲ್ಯದ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಗದಗ ತಾಲೂಕು ಹುಲಕೋಟಿ ಗ್ರಾಮದ ಫಕ್ಕೀರಪ್ಪ ಬಾರಿಗಿಡದ ಬಂಧಿತ ಆರೋಪಿ. ಪ್ರಕರಣ ದಾಖಲಾಗಿದೆ. ಅದೇ ರೀತಿ, ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಇಬ್ಬರನ್ನು ಗದಗ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ನಿವಾಸಿಗಳಾದ ಯಲ್ಲಪ್ಪ ಹೊಸಳ್ಳಿ ಹಾಗೂ ಸುರೇಶ ಹೊಸಳ್ಳಿ ಬಂಧಿತರು. ಪ್ರಕರಣ ದಾಖಲಾಗಿದೆ.
4ರಿಂದ ಆರೋಗ್ಯ ತಪಾಸಣೆ
ಗದಗ: ಜಿಲ್ಲೆಯಲ್ಲಿ 6 ವರ್ಷದ ಮಕ್ಕಳ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆ ತಡೆಯಲು ಏ. 4 ರಿಂದ 1ರ ವರೆಗೆ ಪ್ರತಿ ಅಂಗನವಾಡಿಯಲ್ಲಿರುವ ಮಕ್ಕಳ ಮತ್ತು ಗ್ರಾಮೀಣ ಅಂಗನವಾಡಿ ಮತ್ತು ಅಂಗನವಾಡಿಯಿಂದ ಹೊರಗಿರುವ ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುವುದು. ನಗರ ಪ್ರದೇಶದಲ್ಲಿರುವ ಗರ್ಭಿಣಿ ಮತ್ತು ಬಾಣಂತಿ ತಪಾಸಣೆಯನ್ನು ಕೂಡ ಮಾಡಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ.ಚೆನ್ನಶೆಟ್ಟಿ ತಿಳಿಸಿದ್ದಾರೆ. ಏ. 4 ರಂದು ಅಂಗನವಾಡಿಗಳಲ್ಲಿದ್ದ 6 ವರ್ಷದ ಮಕ್ಕಳ ಎಲ್ಲ ಮಕ್ಕಳ ವೈದ್ಯಕೀಯ ತಪಾಸಣೆ ಮಾಡಲಾಗುವುದು. ಏ. 6ರಂದು ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿಗಳ ಹೊರಗಿರುವ 6 ವರ್ಷದ ಮಕ್ಕಳ ತಪಾಸಣೆ ಮಾಡಲಾಗುವುದು. ಏ. 8ರಂದು ನಗರ ಪ್ರದೇಶಗಳಲ್ಲಿ 6 ವರ್ಷದ ಮಕ್ಕಳ, ಗರ್ಭಿಣಿಯರ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಮರಬಸಪ್ಪ ಕುಕನೂರ ನಿಧನ
ಮುಂಡರಗಿ: ತಾಲೂಕಿನ ಬೂದಿಹಾಳ ಗ್ರಾಮದ ವೀರಶೈವ ಸಮಾಜದ ಹಿರಿಯರು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಮರಬಸಪ್ಪ ಕುಕನೂರ (80) ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ. ಮರಬಸಪ್ಪ ಕುಕನೂರ ಅವರ ನಿಧನಕ್ಕೆ ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಪ್ರಾ. ಎಸ್.ಬಿ.ಕೆ. ಗೌಡರ, ವಿ.ಸಿ. ಹಂಚಿನಾಳ, ಶಂಕರ ಕುಕನೂರ, ನಿಂಗು ಸೊಲಗಿ, ಎಸ್.ವಿ. ಪಾಟೀಲ, ಪಿ.ಎಸ್. ಹಿರೇಮಠ ಸಂತಾಪ ಸೂಚಿಸಿದ್ದಾರೆ.