ಗದಗ ಚುನಾವಣೆಗೆ ಅಣಿ
ಕನ್ನಡಪ್ರಭ ವಾರ್ತೆ, ಗದಗ. ಮಾ. 31
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಇಲ್ಲಿಯವರೆಗೂ ಟಿಕೆಟ್ ಅಂತಿಮಪಡಿಸುವಲ್ಲಿ ಎಲ್ಲ ಪಕ್ಷಗಳೂ ಹೆಣಗಾಡುತ್ತಿದ್ದವು. ಇದೀಗ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಗದಗ ವಿಧಾನಸಭಾ ಕ್ಷೇತ್ರದಲ್ಲೂ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾಗುವ ಮೂಲಕ ಎಲ್ಲದಕ್ಕಿಂತಲೂ ಮೊದಲೇ ಗದಗ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಅಣಿಯಾಗುತ್ತಿದ್ದು, ಉಳಿದ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ಗದಗನಲ್ಲಿ ಪ್ರಚಾರ ಕಾರ್ಯ ಶೀಘ್ರ ಪ್ರಾರಂಭವಾಗುವ ಸಾಧ್ಯತೆಗಳಿವೆ.
ಕಣದಲ್ಲಿ ಯಾರ್ಯಾರು?
ಕಾಂಗ್ರೆಸ್‌ನಿಂದ ನಿರೀಕ್ಷೆಯಂತೆ ಮಾಜಿ ಸಚಿವ ಎಚ್.ಕೆ. ಪಾಟೀಲ, ಬಿಜೆಪಿಯಿಂದ ಹಾಲಿ ಶಾಸಕ ಶ್ರೀಶೈಲಪ್ಪ ಬಿದರೂರ, ಕೆಜೆಪಿಯಿಂದ ಹಿರಿಯ ಮುಖಂಡ 2 ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸಿ ಸೋಲುಂಡಿದ್ದ ಎಸ್.ಬಿ. ಸಂಕಣ್ಣವರ ಕೆಜೆಪಿಗೆ ಸೇರ್ಪಡೆಯಾಗಿ ಕೆಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಇನ್ನು ಬಿಎಸ್ಸಾರ್ ಪಕ್ಷದಿಂದ ಯುವ ಮುಖಂಡ ಅನಿಲ ಮೆಣಸಿನಕಾಯಿಗೆ ಟಿಕೆಟ್ ನಿಗದಿಯಾಗಿದೆ. ಇನ್ನು ಜೆಡಿಎಸ್ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದು, ಕೊನೆ ಕ್ಷಣದಲ್ಲಿ ಬಿಎಸ್ಸಾಆರ್ ಜತೆ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯವಿಲ್ಲ.
ಜಿಲ್ಲೆಯಲ್ಲಿ ಗದಗ ಪ್ರತಿಷ್ಠಿತ ಕ್ಷೇತ್ರ. 2008ರ ಚುನಾವಣೆ ವೇಳೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಚ್.ಕೆ. ಪಾಟೀಲ ಮೊದಲ ಬಾರಿಗೆ ವಿಧಾನಸಭೆ ಸ್ಪರ್ಧೆಯಿಂದ ಗಮನ ಸೆಳೆದಿತ್ತು. ಅಂದು ಬಿಜೆಪಿ ಪ್ರಭಾವದಿಂದ ಶ್ರೀಶೈಲಪ್ಪ ಬಿದರೂರ ವಿರುದ್ಧ ಎಚ್.ಕೆ. ಪಾಟೀಲ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದರು. ಸತತ 20 ವರ್ಷಗಳ ಕಾಲ ಪದವಿಧರ ಕ್ಷೇತ್ರದಿಂದ ಚುನಾಯಿತರಾಗಿ ಹೆಸರು ಮಾಡಿದ್ದ ಪಾಟೀಲ ನಂತರ ನಡೆದ ಪರಿಷತ್ ಚುನಾವಣೆಯಲ್ಲಿಯೂ ಮೋಹನ ಲಿಂಬಿಕಾಯಿ ವಿರುದ್ಧ ಮತ್ತೊಮ್ಮೆ ಸೋಲನುಭವಿಸಿದರು.
ಶೀಘ್ರ ಪ್ರಚಾರ
ಜಿಲ್ಲೆಯ ರೋಣ, ನರಗುಂದ, ಶಿರಹಟ್ಟಿ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಹೆಸರು ಪ್ರಕಟಿಸಿಲ್ಲ. ಆದರೆ, ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಪಕ್ಷಗಳ ಹೆಸರು ಶನಿವಾರ(ಮಾ. 30) ಅಂತಿಮವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಹೆಚ್ಚಿನ ಕಾಲಾವಕಾಶ ಸಿಕ್ಕಂತಾಗಿದೆ. ಶೀಘ್ರ ಪ್ರಚಾರ ಪ್ರಾರಂಭಿಸಲು ಅನುಕೂಲವಾಗಿದೆ. ಜಿಲ್ಲಾಕೇಂದ್ರ ಸ್ಥಾನ ಹೊಂದಿರುವ ಗದಗ-ಬೆಟಗೇರಿ ಅವಳಿ ನಗರದಲ್ಲಿ 95 ಸಾವಿರಕ್ಕೂ ಅಧಿಕ ಮತಗಳಿದ್ದು, ಮತ ಬೇಟೆಗಾಗಿ ಈಗಾಗಲೇ ತಯಾರಿ ನಡೆಸಿದ್ದಾರೆ.
ಪ್ರಭಾವಿ ಪಾಟೀಲ ಕುಂಟುಂಬ
ಗದಗ ಕ್ಷೇತ್ರದ ಇತಿಹಾಸ ಕೆದಕಿದಾಗ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಕುಟುಂಬ ಪ್ರಭಾವ ಜೋರಾಗಿಯೇ ಕಂಡು ಬರುತ್ತಿದೆ. ದಿ. ಕೆ.ಎಚ್. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಇವರ ಕುಟುಂಬವೇ 7ಕ್ಕೂ ಹೆಚ್ಚು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಒಂದು ಬಾರಿ ಜನತಾ ಪರಿವಾರ ಮತ್ತು ಸದ್ಯ ಬಿಜೆಪಿ ಕ್ಷೇತ್ರವನ್ನು ಪ್ರತಿನಿಧಿಸಿದೆ. ಬಹುತೇಕ ಸುಶಿಕ್ಷಿತ ಮತದಾರರನ್ನು ಹೊಂದಿರುವ ಈ ಕ್ಷೇತ್ರದ ಜನತೆ ಹಲವಾರು ಬಾರಿ ಕಾಂಗ್ರೆಸ್ ಪಕ್ಷದ ಮೇಲೆಯೇ ವಿಶ್ವಾಸವಿಟ್ಟಿದ್ದು, ಈ ಬಾರಿ ಚುನಾವಣೆ ಹೆಚ್ಚಿನ ಕುತೂಹಲ ಕೆರಳಿಸಿದೆ.
-ಶಿವಕುಮಾರ ಕುಷ್ಟಗಿ