ಇಂದು ನರಗುಂದಕ್ಕೆ ವರ್ತೂರು ಪ್ರಕಾಶ
ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ತಮ್ಮ ಸಹೋದರ ಆರ್. ರಮಾನಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅವರ ಪರ ಪ್ರಚಾರ ಮಾಡಲು ಜವಳಿ ಸಚಿವ ಆರ್. ವರ್ತೂರು ಪ್ರಕಾಶ್ ಮೇ 2ರಂದು ಬೆಳಗ್ಗೆ 8 ಗಂಟೆಗೆ ಪಟ್ಟಣಕ್ಕೆ ಆಗಮಿಸಿ, ರೋಡ್ ಶೋ ನಡೆಸುವರು ಎಂದು ಚಿದಾನಂದ ಜಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಮತದಾರರಿಗೆ ಬಸ್ ಸೌಲಭ್ಯ
ಗದಗ: ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಮತದಾರರರು ತಮ್ಮ ಮತಗಟ್ಟೆಗೆ ತೆರಳಲು ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸೌಲಭ್ಯ ಕಲ್ಪಿಸಿದೆ. ಬಸ್ಸುಗಳು ಹಳ್ಳಿಗಳಿಂದ ನಾಲ್ಕು ಬಾರಿ ಮತಗಟ್ಟೆಗೆ ಸಂಚರಿಸಲಿವೆ. ಕನಿಷ್ಠ ಪ್ರಯಾಣ ದರ ರು. 5ನ್ನು ಪಾವತಿಸಿ ಮತದಾರರು ಬಸ್‌ನಲ್ಲಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎಸ್.ಟಿ. ಅಂಜನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಗದಗ: ಮೇ 5ರಂದು ಮುಕ್ತ, ಶಾಂತಿಯುತ ಮತದಾನ ನಡೆಯುವಂತಾಗಲು ಜಿಲ್ಲೆಯ ಶಿರಹಟ್ಟಿ, ಗದಗ, ರೋಣ ಮತ್ತು ನರಗುಂದ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 3ರ ಸಂಜೆ 5 ಗಂಟೆಯಿಂದ ಮೇ 5ರ ಮಧ್ಯರಾತ್ರಿ ವರೆಗೆ ಹಾಗೂ ಮತ ಎಣಿಕೆ ನಡೆಯುವ ಮುನ್ನ ದಿನವಾದ ಮೇ 7ರ ಮಧ್ಯರಾತ್ರಿಯಿಂದ 8ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎಸ್.ಟಿ. ಅಂಜನಕುಮಾರ್ ಆದೇಶ ಹೊರಡಿಸಿದ್ದಾರೆ.