ಕಾಂಗ್ರೆಸ್ಗೆ ಮತ ಕೇಳುವ ನೈತಿಕತೆ ಇಲ್ಲ: ಲಮಾಣಿ
ಲಕ್ಷ್ಮೇಶ್ವರ: ಕೇಂದ್ರದ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಬರೀ ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ರಾಜ್ಯದಲ್ಲಿ ವೋಟು ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ ಸೋಮೇಶ್ವರ ಸಹಕಾರಿ ನೂಲಿನ ಗಿರಣಿಯಿಂದ ಪಾದಯಾತ್ರೆ ಮೂಲಕ ಪ್ರಚಾರ ಕೈಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಪಟ್ಟಣದ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಹಿರಿಯರಿಗೆ, ಮಹಿಳೆಯರಿಗೆ ಕೈಮುಗಿದು ಬಿಜೆಪಿಯ ಗುರುತಿಗೆ ಮತ ನೀಡಿ ನನ್ನನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ವಿನಂತಿಸಿದರು.
ಕೇಂದ್ರ ಸರ್ಕಾರ ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಕಾಂಗ್ರೆಸ್ ತನ್ನ ಮೇಲಿನ ಕಳಂಕವನ್ನು ಮೊದಲು ತೊಳೆದುಕೊಂಡು ಪರಿಶುದ್ಧವಾಗಿ ಬಂದು ಜನರ ಬಳಿ ಮತ ಕೇಳಬೇಕು ಎಂದರು. ಪತ್ನಿ ಈರಮ್ಮ ಲಮಾಣಿ, ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಚೆಂಬಣ್ಣ ಬಾಳಿಕಾಯಿ, ಬಸಣ್ಣ ಹತ್ತಿಕಾಳ, ಸೋಮಣ್ಣ ಮುಳಗುಂದ, ಪರಸಣ್ಣ ಮುಳಗುಂದ, ನಿಂಗಪ್ಪ ಬನ್ನಿ, ಪುರಸಭೆಯ ಸದಸ್ಯ ರಾಮಣ್ಣ ರಿತ್ತಿ, ನೀಲಪ್ಪ ಹತ್ತಿ, ನಾಗರಾಜ ಚಿಂಚಲಿ, ಚೆಂದ್ರು ಹಂಪಣ್ಣವರ ಮತ್ತಿತರರು ಪಾಲ್ಗೊಂಡಿದ್ದರು.