ಕನ್ನಡ ನಿರ್ಲಕ್ಷಿಸಿದರೆ ಶಾಸ್ತಿ: ಗೊಲ್ಲರ
ಗದಗ: ಚುನಾವಣೆಯಲ್ಲಿ ಗೆದ್ದು ಬಂದರೆ ಮರಾಠಿಯಲ್ಲೇ ಸರ್ಕಾರಿ ದಾಖಲೆ ಒದಗಿಸುತ್ತೇನೆ ಎಂದು ಈಚೆಗೆ ಬಹಿರಂಗ ಸಭೆಯಲ್ಲಿ ಹೇಳಿದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಹೇಳಿಕೆಯನ್ನು ಕನ್ನಡ ಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುರಾಜಗೌಡ ಪಾಟೀಲ ಹಾಗೂ ಕಾರ್ಯದರ್ಶಿ ಮಲ್ಲು ಗೊಲ್ಲರ ತಿಳಿಸಿದರು. ಉದ್ದಟತನದ ಕನ್ನಡ ವಿರೋಧಿ ಹೇಳಿಕೆ ನೀಡಿ ಮರಾಠಿಗರ ಓಟು ಕೀಳಲು ಯತ್ನಿಸಿದ ಪಾಟೀಲಗೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕು. ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡದ ಅನ್ನ ಉಂಡು, ಕನ್ನಡದ ನೀರು ಗಾಳಿ ಸೇವಿಸಿ ಬೆಳೆದು, ಚುನಾವಣೆಯಲ್ಲಿ ಗೆಲ್ಲಬೇಕೆಂಬ ಸ್ವಾರ್ಥದಿಂದ ಕನ್ನಡ ವಿರೋಧಿ ನೀತಿ ತಾಳಿರುವ ರಾಜಕಾರಣಿಗಳಿಗೆ ಕನ್ನಡ ಮತ ಬಾಂಧವರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕನ್ನಡ ಪರ ಹೋರಾಡುವ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ.