ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ

Vishwanath S
Updated On : 5 May 2013, 11:34 am

ಕನ್ನಡಪ್ರಭ ವಾರ್ತೆ, ಗದಗ, ಮೇ  4
ಜಿಲ್ಲೆಯಲ್ಲಿ ಮೇ 5 ರಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಟಿ. ಅಂಜನಕುಮಾರ್ ಹೇಳಿದರು.
ಶುಕ್ರವಾರ ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಬಹುದಾದ ಸಂಭಾವ್ಯ ಬಾಡೂಟ ಮತ್ತು ಕೋಳಿ-ಕುರಿ ಮಾಂಸ ವಿತರಣೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಗ್ರಾಮೀಣ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಖಾತೆಗೆ ಟೋಕನ್ ಮೂಲಕ ನೇರವಾಗಿ ಹಣ ಜಮೆ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವ್ಯವಸ್ಥಿತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲಿಸಲಾಗಿದೆ. ಈ ಚುನಾವಣಾ ಕಾರ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 100 ಬಸ್‌ಗಳನ್ನು ಬಳಸಿಕೊಳ್ಳಲಾಗುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಚುನಾವಣಾ ಕಾರ್ಯದ ನಿಮಿತ್ತ ಗ್ರಾಮೀಣ ಪ್ರದೇಶಕ್ಕೆ ತೆರಳುವ ವಾಹನಗಳು ಗ್ರಾಮೀಣ ಮತದಾರರಿರುವಲ್ಲಿ ತಮ್ಮ ಸಮೀಪದ ಮತಗಟ್ಟೆಗೆ ತೆರಳಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ಈ ವಾಹನಗಳು ದಿನಕ್ಕೆ 4 ಬಾರಿ ಸಂಚಾರಗೊಳ್ಳಲಿವೆ. ಪ್ರಯಾಣಿಕರು ಕನಿಷ್ಠ ಪ್ರಯಾಣ ದರ ರು. 5 ಪಾವತಿಸಿ ಸಂಚರಿಸಬಹುದಾಗಿದೆ. ಈ ವರೆಗೆ ಗದಗದಲ್ಲಿ ರು. 3 ಲಕ್ಷ ಹಾಗೂ ನರಗುಂದದಲ್ಲಿ ರು. 2.30 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತು ಸಮಗ್ರ ಪರಿಶೀಲನೆಯ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ವರೆಗೆ ಜಿಲ್ಲೆಯಲ್ಲಿ ಕಾಸಿಗಾಗಿ ಪ್ರಕಟವಾದ 2 ಸುದ್ದಿ ಭಾಗಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸು ಜಾರಿ ಮಾಡಲಾಗುವುದು. ಈ ವರೆಗೆ ಜಿಲ್ಲೆಯಲ್ಲಿ ರು. 2028.13 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಪರವಾನಿಗೆ ಪಡೆದ 117 ಮದ್ಯದ ಅಂಗಡಿಗಳಿದ್ದು, ಅವುಗಳ ಸಕಾಲಿಕ ಪರಿಶೀಲನೆಗೆ ಅಬಕಾರಿ ಇಲಾಖೆಯವರೊಂದಿಗೆ ಸಂಚಾರಿ ದಳ ಮತ್ತು ಎಂ.ಸಿ.ಸಿ. ಸ್ಕ್ವಾಡ್ ತಂಡಗಳಿಗೆ ಜವಾಬ್ದಾರಿ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದ 136 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮ ಅನುಷ್ಠಾನ ಸಮಿತಿಯು ಕೈಗೊಂಡ ಜಾಗೃತಿ ಹಾಗೂ ಪ್ರಚಾರ ಕಾರ್ಯಕ್ರಮಗಳ ಫಲಶೃತಿಯಿಂದಾಗಿ 15,490 ಪುರುಷರು ಹಾಗೂ 16,798 ಮಹಿಳೆಯರು ಸೇರಿದಂತೆ 32,288 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 3,78,595 ಪುರುಷರು ಹಾಗೂ 3,61,707 ಮಹಿಳಾ ಮತದಾರರು ಸೇರಿದಂತೆ ಒಟ್ಟು 7,40,302 ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ 182717, ಗದಗ ಮತಕ್ಷೇತ್ರದಲ್ಲಿ 191052, ರೋಣ ಮತಕ್ಷೇತ್ರದಲ್ಲಿ 159351 ಹಾಗೂ ನರಗುಂದ ಮತಕ್ಷೇತ್ರದಲ್ಲಿ 171082 ಮತದಾರರಿದ್ದಾರೆ. ಮತದಾರರಲ್ಲಿ ಒಟ್ಟು 739699 ಜನರು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 65.80 ರಷ್ಟು ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಶೇ. 80 ರಷ್ಟು ಮತದಾನ ನಡೆಸುವ ಗುರಿ ಹೊಂದಲಾಗಿದೆ. ಶಾಂತಿಯುತ, ಮುಕ್ತ ಹಾಗೂ ನಿರ್ಭೀತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 17 ಪ್ರಕರಣಗಳನ್ನು ಈವರೆಗೆ ದಾಖಲಿಸಿಕೊಂಡಿದ್ದು, 14 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 20 ರಿಂದ ಈ ವರೆಗೆ 627 ಜನರ ಮೇಲೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸಿಇಓ ವೀರಣ್ಣ ತುರಮರಿ ಹಾಗೂ ಎಸ್ಪಿ ಡಾ. ಶರಣಪ್ಪ ಎಸ್.ಡಿ ಮುಂತಾದವರು ಮಾತನಾಡಿದರು. ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement