ರೋಣ: ಚುನಾವಣೆಗೆ ಸಜ್ಜು
ರೋಣ: ಮೇ 5 ರಂದು ಜರುಗಲಿರುವ ರೋಣ ವಿಧಾನಸಭಾ ಮತಕ್ಷೇತ್ರದ ಚುನಾವಣೆಗೆ ತಾಲೂಕು ಆಡಳಿತ ಮತ್ತು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಒಟ್ಟು 248 ಮತಗಟ್ಟೆಗಳಲ್ಲಿ 64 ಸೂಕ್ಷ್ಮ ಮತಗಟ್ಟೆಗಳು, 64 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ರೋಣ ಮತಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 195336 ಇದರಲ್ಲಿ 99634 ಪುರುಷರು, 95702 ಮಹಿಳಾ ಮತದಾರರಿದ್ದಾರೆ. 401 ಚುನಾವಣಾ ಸೇವಾ ಮತದಾರರಿದ್ದು, ಇದರಲ್ಲಿ 304 ಪುರುಷ ಮತ್ತು 97 ಮಹಿಳಾ ಮತದಾರರಿದ್ದಾರೆ. ಚುನಾವಣೆ ನಿಮಿತ್ತ 71 ಜನ ಮೈಕ್ರೋ ಆಬ್ಸ್‌ರ್ವರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮತಯಂತ್ರ ಮತ್ತು ಸಿಬ್ಬಂದಿಯನ್ನು ವಿವಿಧೆಡೆ ಮತಗಟ್ಟೆಗಳಿಗೆ ಕರೆದೊಯ್ಯಲು 26 ಸಾರಿಗೆ ಸಂಸ್ಥೆಯ ಬಸ್‌ಗಳು, 13 ವ್ಯಾನ್‌ಗಳು, 5 ಜೀಪ್‌ಗಳ ವ್ಯವಸ್ಥೆ ಮಾಡಲಾಗಿದೆ.
ಅತಿ ಸೂಕ್ಷ್ಮ ಮತಗಟ್ಟೆಗಳು: ರೋಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 64 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಅದರಲ್ಲಿ ತಾಲೂಕಿನ ಬೊಮ್ಮಸಾಗರ, ಬಳಗೋಡ, ಮುಶಿಗೇರಿ, ಮಾಡಲಗೇರಿ, ಕುರಹಟ್ಟಿ, ಕೊತಬಾಳ, ದಿಂಡೂರ, ಹಾಲಕೇರಿ, ಸೂಡಿ, ಕುಂಟೋಜಿ, ಗೋಗೇರಿ, ಹೊಸಹಳ್ಳಿ, ಜಕ್ಕಲಿ, ಗಜೇಂದ್ರಗಡ, ಹಿರೇಅಳಗುಂಡಿ, ನೈನಾಪುರ, ನರೇಗಲ್, ಗದಗ ತಾಲೂಕಿನ ಕೋಟುಮಚಗಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳನ್ನು ಗುರುತಿಸಲಾಗಿದೆ. ಇಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ರೋಣ ಮತಕ್ಷೇತ್ರದಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಶಾಂತಯುತವಾಗಿ ಮತದಾನ ನಡೆಯುಲು ಮುಂಜಾಗ್ರತೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿಎಸ್ಪಿ 1, ಸಿಪಿಐ 4, ಪಿಎಸ್‌ಐ 5, ಎಎಸ್‌ಐ 15 (ಮಹಿಳಾ-1), ಮುಖ್ಯ ಪೇದೆ 31, ಪೊಲೀಸ್ 166 (ಮಹಿಳಾ-9), ಹೋಂಗಾರ್ಡ್ 150 (ಮಹಿಳಾ-8), ಅರೆ ಸೇನಾಪಡೆ ಸಿಬ್ಬಂದಿ 140, ಕೆಎಸ್‌ಆರ್‌ಪಿ ತುಕಡಿಯನ್ನು ನೇಮಿಸಲಾಗಿದೆ.
ಮತಗಟ್ಟೆಗಳಲ್ಲಿ ಸಿ.ಸಿ. ಕ್ಯಾಮೆರಾ: ಚುನಾವಣೆ ವ್ಯವಸ್ಥಿತವಾಗಿ ನಡೆಸಲು ಅನೇಕ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಒಟ್ಟು 80 ವಿಡಿಯೊ ಕ್ಯಾಮೆರಾಗಳು ಮತಕ್ಷೇತ್ರದಲ್ಲಿ ಹದ್ದಿನ ಕಣ್ಣಿಟ್ಟಿವೆ. ಅವಶ್ಯವೆನಿಸಿದ ಮತಗಟ್ಟೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ರೋಣ ಮತಗಟ್ಟೆ ಸಂಖ್ಯೆ 107, 110 ಮತ್ತು 112, ನಿಡಗುಂದಿ ಮತಗಟ್ಟೆ ಸಂಖ್ಯೆ 141, ಜಕ್ಕಲಿ ಮತಗಟ್ಟೆ ಸಂಖ್ಯೆ 141, ಅಬ್ಬಿಗೇರಿ ಮತಗಟ್ಟೆ ಸಂಖ್ಯೆ 148 ಮತ್ತು 149, ನರೇಗಲ್ ಮತಗಟ್ಟೆ 169 ಮತ್ತು 171 ರಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ರೋಣ ಮತಕ್ಷೇತ್ರದ ಚುನಾವಣಾಧಿಕಾರಿ ಎನ್.ಆರ್. ಉಮೇಶ ತಿಳಿಸಿದರು.