ಅಧಿಕಾರಿಗಳ ಮನವೊಲಿಕೆ: ಮತ ಚಲಾವಣೆ
ಲಕ್ಷ್ಮೇಶ್ವರ: ಪಟ್ಟಣದ 15ನೇ ವಾರ್ಡಿನ ಗೋಸಾವಿ ಕುಟುಂಬದ ಸುಮಾರು 60ಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕರಿಸಿದ್ದರು. ಆದರೆ, ಸಂಜೆ 5.55 ರ ವೇಳೆ ಉಪ ತಹಸಿಲ್ದಾರ್ ಮೋಹನ ಕಟ್ಟಿಮನಿ ಹಾಗೂ ಸ್ಥಳೀಯ ಎಸ್ಐ ಟಿ. ವೆಂಕಟಸ್ವಾಮಿಯವರು ಮನವೊಲಿಸಿದ ಬಳಿಕ ಅವರೆಲ್ಲ ಮತದಾನ ಮಾಡಿದರು.
50 ವರ್ಷಗಳಿಂದ ನಾವು ಬಡತನದಲ್ಲಿಯೇ ಗುಡಿಸಲುಗಳಲ್ಲಿ ವಾಸಿಸುತ್ತ ಜೀವನ ಸಾಗಿಸುತ್ತಿದ್ದೇವೆ. ಇದುವರೆಗೂ ಯಾರೂ ನಮ್ಮ ಕಷ್ಟಗಳನ್ನು ಆಲಿಸಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ನಾವು ರಾಜಕೀಯ ಪಕ್ಷಗಳ ನಾಯಕರಿಗೆ ಕಾಣುತ್ತೇವೆ ಎಂದು ಬಾಳಪ್ಪ ಗೋಸಾವಿ ತಮ್ಮ ನೋವು ತೋಡಿಕೊಂಡರು. ಸಂಜೆವರೆಗೆ ಯಾವುದೇ ಮುಖಂಡರು ಮತ ಹಾಕುವಂತೆ ಕೇಳಿಕೊಂಡಿಲ್ಲ. ಬಯಲೇ ನಮಗೆ ಶೌಚಾಲಯವಾಗಿದೆ. ಕುಡಿಯಲು ನೀರಿನ ನಲ್ಲಿಗಳಿಲ್ಲ. ಗುಡಿಸಲು ಸುತ್ತಮುತ್ತ ಸದಾ ಗಲೀಜಿನಿಂದ ಕೂಡಿದ್ದು, ಸೊಳ್ಳೆಯ ಕಾಟಕ್ಕೆ ಬೇಸತ್ತು ನಮಗೆ ಜೀವನವೇ ಸಾಕಾಗಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೇಶನ್ ಕಾರ್ಡ್ ಹೊರತು ಪಡಿಸಿದರೆ, ಬೇರೆ ಯಾವ ಸೌಲಭ್ಯಗಳು ಇಲ್ಲವಾಗಿವೆ. ಅದಕ್ಕಾಗಿ ನಾವು ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ಮತದಾನ ಮಾಡದಿರಲು ನಿರ್ಧರಿಸಿದ್ದೆವು. ಆದರೆ, ಕೊನೆಗಳಿಗೆಯಲ್ಲಿ ಎಸ್ಐ ಟಿ. ವೆಂಕಟಸ್ವಾಮಿಯವರ ಮಾತಿಗೆ ಮಣಿದು ಸಂಜೆ ಮತದಾನ ಮಾಡಿರುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದರು.