ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾದ್ಯಂತ ಶಾಂತಿಯುತ ಮತದಾನ

Vishwanath S
Updated On : 6 May 2013, 10:39 am

ಕನ್ನಡಪ್ರಭ ವಾರ್ತೆ, ಗದಗ, ಮೇ 5
ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಕುರುಕ್ಷೇತ್ರವೆಂದೇ ಬಣ್ಣಿಸಲ್ಪಡುವ ರಾಜ್ಯ ವಿಧಾನಸಭಾ ಚುನಾವಣೆಗೆ ಭಾನುವಾರ ಜಿಲ್ಲೆಯ ಗದಗ, ರೋಣ, ನರಗುಂದ, ಶಿರಹಟ್ಟಿ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದೇ ಜಿಲ್ಲೆಯಾದ್ಯಂತ ಮತದಾರರು ತಮ್ಮ ಮತ ಚಲಾಯಿಸಿದರು.
ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನ ಪ್ರಾರಂಭದಲ್ಲಿ ನೀರಸವಾಗಿತ್ತಾದರೂ ನಂತರ ತೀವ್ರತೆ ಪಡೆಯಿತು. 11 ಗಂಟೆಯವರೆಗೂ ಅತ್ಯಂತ ಬಿರುಸಿನ ಮತದಾನ ನಡೆಯಿತು. 11 ಗಂಟೆಗೆಯವರೆಗೆ ಶೇ. 25 ರಷ್ಟು ಮತದಾನವಾಗಿತ್ತು. ನಂತರ ಬಿಸಿಲಿನ ಪ್ರತಾಪ ಹೆಚ್ಚುತ್ತಿದ್ದಂತೆ ಅದರೊಂದಿಗೆ ಮತದಾನ ಕಾವು ಬಲು ಜೋರಾಗಿಯೇ ಏರತೊಡಗಿತು. 12 ಗಂಟೆ ವೇಳೆ ಶೇ. 30 ರಷ್ಟು ಮತದಾನ ನಡೆಯಿತು.
12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಮತದಾನ ಪ್ರಕ್ರಿಯೆ ಅಲ್ಪ ನೀರಸಗೊಂಡರೂ 2 ಗಂಟೆಯ ವೇಳೆಗೆ ಶೇ. 45 ರಷ್ಟು ಮತದಾನವಾಗಿತ್ತು. 3.30ರ ವೇಳೆಗೆ ಮತದಾನದ ಪ್ರಮಾಣ ಶೇ. 50ನ್ನು ದಾಟುವ ಮೂಲಕ ಈ ಬಾರಿ ಅತ್ಯಂತ ಹೆಚ್ಚಿನ ಮತದಾನವಾಗುವ ಸಾಧ್ಯತೆಯನ್ನು ಮತದಾರರು ಮತದಾನದ ಮೂಲಕ ತೋರ್ಪಡಿಸಿದ್ದಾರೆ. ಈ ಬಾರಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ಕ್ರಮದಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನುವ ಲೆಕ್ಕಚಾರದಲ್ಲಿ ಎಲ್ಲ ಪಕ್ಷಗಳು ಮುಳುಗಿವೆ.
ಕೈಕೊಟ್ಟ ಮತಯಂತ್ರ: ಬೆಳಗ್ಗೆ ಮತದಾನ ಪ್ರಾರಂಭವಾಗುತ್ತಿದ್ದಂತೆಯೇ ರೋಣ ಕ್ಷೇತ್ರದ ಹೊಸಳ್ಳಿ ಗ್ರಾಮದಲ್ಲಿನ ಶಾಲೆಯೊಂದರ ಮತದಾನ ಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತು. ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು ಮತಯಂತ್ರ ಸರಿಪಡಿಸಿದ ನಂತರ ಮತದಾನ ಪ್ರಾರಂಭವಾಯಿತು. ಮುಳಗುಂದ ಪಟ್ಟಣದ ಬೂತ್ 182 ರಲ್ಲಿನ ಮತಯಂತ್ರದಲ್ಲಿಯೂ ಅಲ್ಪ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿಯೂ ಮತದಾನ ಸ್ಥಗಿತಗೊಂಡಿತ್ತು. ನರೇಗಲ್ಲ ಪಟ್ಟಣದ 16ನೇ ವಾರ್ಡ್‌ನ ಬೂತ್‌ನ 172ರಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾ 2 ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದು ಹಲವು ಸಂಶಯಕ್ಕೆ ಕಾರಣವಾಗಿದೆ.
ಲಘು ಲಾಠಿ ಪ್ರಹಾರ: ತೀವ್ರ ಕುತೂಹಲ ಕೆರಳಿಸಿರುವ ನರಗುಂದ ವಿಧಾನಸಭಾ ಕ್ಷೇತ್ರದ ನರಗುಂದ ಪಟ್ಟಣದಲ್ಲಿ ಬೆಳಗ್ಗೆ 11 ಗಂಟೆಗೆ ವೇಳೆಗೆ ಸೋಮಾಪುರ, ಕಸಬಾ ಭಾಗಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕ್ಷುಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತು. ನಂತರ ಮಧ್ಯಾಹ್ನ 3.30ರ ವೇಳೆಗೆ ವಾರ್ಡ್ ಸಂಖ್ಯೆ 8 ಹಾಗೂ 9ರಲ್ಲಿ ಮತದಾರರ ಹೆಸರಿನ ವಿಷಯವಾಗಿ ಪ್ರಾರಂಭವಾದ ಗೊಂದಲದಿಂದ ತೀವ್ರ ಗದ್ದಲಉಂಟಾಯಿತು. ಇದರಿಂದ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement