ಬಿಸಿಲಿಗೆ ಬಸವಳಿದ ಮತದಾರ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 5
ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರು ಜರುಗಿದ ಮತದಾನದ ವೇಳೆ ಪಟ್ಟಣದ ಜನತೆ ಬಿಸಿಲಿನ ತಾಪಕ್ಕೆ ಚಡಪಡಿಸುವಂತಾಯಿತು.
ಬೆಳಗ್ಗೆಯಿಂದಲೇ ಚುರುಕಿನಿಂದ ಪ್ರಾರಂಭವಾದ ಮತದಾನ ಸುಮಾರು 10 ಗಂಟೆಯ ನಂತರ ಸೂರ್ಯನ ಪ್ರಕರತೆಯು ಹೆಚ್ಚಾದ ಹಿನ್ನೆಲೆಯಲ್ಲಿ ಮತದಾರರು ಮತ ಚಲಾಯಿಸಲು ಹಿಂದೇಟು ಹಾಕಿದ್ದರಿಂದ ಮಧ್ಯಾಹ್ನದವರೆಗೆ ಮತದಾನ ಪ್ರಕ್ರಿಯೆಯಲ್ಲಿ ಅಲ್ಪ ಹಿನ್ನಡೆಯಾಯಿತು. ಆದರೆ, ಸಂಜೆಯಾಗುತ್ತಿದ್ದಂತೆಯೇ ಮತಗಟ್ಟೆಗೆ ಜನರು ತಂಡೋಪ ತಂಡವಾಗಿ ಆಗಮಿಸಿ ಮತಹಾಕಿದರು. ಶಾಸಕ ಸಿ.ಸಿ. ಪಾಟೀಲ 66ನೇ ಮತಗಟ್ಟೆಗೆ ಕುಟುಂಬ ಸಮೇತ ತೆರಳಿ ಮತದಾನ ಮಾಡಿದರು.
ಲಘು ಲಾಠಿ ಪ್ರಹಾರ: ಪಟ್ಟಣದ 74,75,71,70 ಮತಗಟ್ಟೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆಗೆ ಸಂಬಂಧಪಟ್ಟಂತೆ ವಾಗ್ವಾದ ನಡೆದು, ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಮತದಾರರಿಗೆ ಮತದಾನ ಮಾಡಲು ಅನುಕೂಲ ಮಾಡಿಕೊಟ್ಟರು.
ಬೇಜವಾಬ್ದಾರಿತನ: ಪಟ್ಟಣದ ಶಾಲೆ ನಂ. 6ರ ಹಳೇ ಕಟ್ಟಡದ 66ನೇ ಮತಗಟ್ಟೆಯಲ್ಲಿ ಸೂಕ್ತ ಪೊಲೀಸ್ ಭದ್ರತೆ ಇರದ ಹಿನ್ನೆಲೆಯಲ್ಲಿ ಜನತೆ ಮತದಾನ ಮಾಡುವಲ್ಲಿ ನೂಕು ನುಗ್ಗಲು ಉಂಟಾಯಿತು. ಇದರಿಂದ ಹಲವು ಮಹಿಳೆಯರು ಮತ್ತು ವೃದ್ಧರು ಮತದಾನ ಮಾಡದೇ ಹೋದರು. ಈ ಮತಗಟ್ಟೆಯಲ್ಲಿ ಮಹಿಳೆಯರಿಗೆ ಸರದಿಯಲ್ಲಿ ನಿಂತುಕೊಳ್ಳಲು ನೆರಳು ಇಲ್ಲ. ಅಲ್ಲದೆ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು ಸರಿಯಾಗಿ ನಿಯಂತ್ರಣ ಮಾಡದೇ ಇರುವುದರಿಂದ ಮತದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೀಕ್ಷಕರ ಭೇಟಿ: ನರಗುಂದ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ದೆಹಲಿಯ ಚುನಾವಣೆ ವೀಕ್ಷಕ ಜ್ಯೋತೆ ಕಲಾಶಿಯವರು ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಕೇಂದ್ರದಲ್ಲಿರುವ ಸಿಬ್ಬಂದಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಮತದಾರರಿಗೆ ಮತದಾನ ಮಾಡಲು ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.