ಮತ ನಿರಾಕರಿಸಿದ ದೊಡ್ಡಮೇಟಿ
ಕನ್ನಡಪ್ರಭ ವಾರ್ತೆ ಗದಗ ಮೇ 5
ಕರ್ನಾಟಕ ಏಕೀಕರಣಕ್ಕೆ ದೊಡ್ಡಮೇಟಿ ಕುಟುಂಬದ ಕೊಡುಗೆ ದೊಡ್ಡದು. ಮಹಾತ್ಮ ಗಾಂಧಿಯವರನ್ನು ಜಕ್ಕಲಿಯಂಥ ಪುಟ್ಟ ಗ್ರಾಮಕ್ಕೆ ಕರೆ ತಂದ ಕೀರ್ತಿ ಈ ಕುಟುಂಬಕ್ಕಿದೆ. ರೋಣ ವಿಧಾನಸಭಾ ಕ್ಷೇತ್ರವನ್ನು 5 ಬಾರಿ ಇವರ ಕುಟುಂಬವೇ ಪ್ರತಿನಿಧಿಸಿತ್ತು. ಇಂಥ ಕುಟುಂಬದ ಸದಸ್ಯ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಭಾನುವಾರ ಮತದಾನ ಮಾಡಲು ನಿರಾಕರಿಸಿ, ಜಿಲ್ಲೆಯ ಮಟ್ಟಿಗೆ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ.
ದೊಡ್ಡಮೇಟಿ ಕುಟುಂಬಕ್ಕೆ ರೋಣ ಕ್ಷೇತ್ರ ಮಾತ್ರವಲ್ಲ, ರಾಜ್ಯದಲ್ಲೇ ಉತ್ತಮ ಗೌರವವಿದೆ. ಸದ್ಯ ಮತದಾನ ತಿರಸ್ಕರಿಸಿರುವ ಜ್ಞಾನದೇವ್ ತಂದೆ ಅಂದಾನಪ್ಪ ದೊಡ್ಡಮೇಟಿ ಮುಂಬೈ ವಿಧಾನಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಇತಿಹಾಸ ಸೃಷ್ಟಿಸಿದ್ದರು. ಬಳಿಕ 1957, 1962, 1967ರಲ್ಲಿ ಸತತ ಮೂರು ಬಾರಿ ರೋಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜ್ಞಾನದೇವ್ 1983, 1985ರಲ್ಲಿ ಶಾಸಕರಾಗಿದ್ದರು.
ಭ್ರಷ್ಟಾಚಾರ ವಿರೋಧಿ: ಜ್ಞಾನದೇವ್ ಮಾತ್ರವಲ್ಲ, ಅವರ ತಂದೆಯವರೂ ಭ್ರಷ್ಟಾಚಾರವನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಎಂದೂ ಸರ್ಕಾರ ಅಥವಾ ಸಾರ್ವಜನಿಕರ ಹಣವನ್ನು ಬಳಸುತ್ತಿರಲಿಲ್ಲ. ಎರಡು ಬಾರಿ ಶಾಸಕರಾಗಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜ್ಞಾನದೇವ್, ಇಂದಿಗೂ ಸರ್ಕಾರಿ ಬಸ್‌ನಲ್ಲೇ ಓಡಾಡುತ್ತಾರೆ. ಸಾಮಾನ್ಯರಂತೆ ಸರಳ ಜೀವನ ನಡೆಸುತ್ತಿದ್ದಾರೆ.
ನಿರಾಕರಣೆ ಪತ್ರ: ನಾನು, ಜ್ಞಾನದೇವ ದೊಡ್ಡಮೇಟಿ, ಯಾವುದೇ ವ್ಯಕ್ತಿಯ ವಿರುದ್ಧ ಇರುವುದಿಲ್ಲ. ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ನನ್ನ ಮತ. ಆತ್ಮವಂಚನೆಗೆ ಒಳಗಾಗದೆ ಮತವನ್ನು ನಿರಾಕರಿಸುತ್ತೇನೆ ಎಂದು ಚುನಾವಣಾಧಿಕಾರಿಗಳಿಗೆ ನಿರಾಕರಣೆ ಪತ್ರ ನೀಡಿದ್ದಾರೆ. ಚುನಾವಣಾ ಆಯೋಗ ಫಾರಂ ನಂ. 49 (ಓ)ರಲ್ಲಿ ಇಂಥದ್ದೊಂದು ಅವಕಾಶ ಕಲ್ಪಿಸಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ಜ್ಞಾನದೇವ್ ಭಾನುವಾರ ಮತಗಟ್ಟೆಗೆ ತೆರಳಿ, ನಾನು ನನ್ನ ಮತ ನಿರಾಕರಣೆ ಮಾಡುತ್ತೇನೆ. ಫಾರಂ ಕೊಡಿ ಎಂದಾಗ ಚುನಾವಣಾ ಕಾರ್ಯಕ್ಕೆ ಬಂದ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ನಂತರ ದೊಡ್ಡಮೇಟಿ ಬಿಳಿ ಹಾಳೆಯ ಮೇಲೆ ತಮ್ಮ ಮತ ನಿರಾಕರಣೆಯನ್ನು ಬರೆದು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು.
- ಶಿವಕುಮಾರ ಕುಷ್ಟಗಿ