ರಹಸ್ಯ ಹೋಗಿ ಗುಂಪು ಮತದಾನವಾಯಿತೇ?
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 5
ಚುನಾವಣಾ ಆಯೋಗ ಗುಪ್ತ ಮತದಾನ ಎಂದು ಘೋಷಿಸಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಅಧಿಕಾರದ ಹೆದರಿಕೆಯೋ- ಅನೇಕರು ಕೂಡಿಕೊಂಡು 'ರಹಸ್ಯ' ಮತದಾನ ಮಾಡಿದ್ದು ಜಿಜ್ಞಾಸೆಗೆ ಕಾರಣವಾಗಿದೆ.
ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿ ಶಾಸಕ ರಾಮಣ್ಣ ಲಮಾಣಿ ಮತ್ತು ಅವರ ಪತ್ನಿ ಮತಕೇಂದ್ರಕ್ಕೆ ತೆರಳಿ ಜತೆಯಾಗಿ ಮತದಾನ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಆದರೂ ಮತಗಟ್ಟೆ ಅಧಿಕಾರಿ ಅಥವಾ ತಾಲೂಕು ಮಟ್ಟದ ಚುನಾವಣಾ ಅಧಿಕಾರಿ ಟಿ. ದಿನೇಶ್ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಚುನಾವಣಾಧಿಕಾರಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೇರೆ ಪಕ್ಷದ ಅಭ್ಯರ್ಥಿಗಳು ಮತದಾನ ಮಾಡುವ ಭಾವಚಿತ್ರ ತೆಗೆಯಲು ಮಾಧ್ಯಮದವರು ಚುನಾವಣಾ ಅಧಿಕಾರಿ ಟಿ. ದಿನೇಶ್‌ರನ್ನು ಕೇಳಿದರೆ ಚುನಾವಣಾ ಆಯೋಗ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಪರವಾನಿಗೆ ಪತ್ರ ತರಬೇಕು ಎಂದು ಹೇಳಿ ಪ್ರವೇಶ ನಿರಾಕರಿಸಿದ್ದು, ಪಾರದರ್ಶಕತೆಯನ್ನು ಗಾಳಿಗೆ ತೂರಿದ್ದಾರೆ. ಅಧಿಕಾರಿಯನ್ನು ಸಂಪರ್ಕಿಸಿ ವಿವರಣೆ ಕೇಳಿದಾಗ ಗೌಪ್ಯ ಮತದಾನಕ್ಕೆ ಒತ್ತು ನೀಡಬೇಕಾಗಿದೆ. ಬಹಿರಂಗ ಮತದಾನವಾಗಿರುವುದು ಗಮನಕ್ಕೆ ಬಂದರೆ ಕೇಂದ್ರದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆರೋಪ: ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಈ ಕುರಿತು ಮಾತನಾಡಿ, ತಾಲೂಕು ಮಟ್ಟದ ಚುನಾವಣಾ ಅಧಿಕಾರಿ ಟಿ. ದಿನೇಶ್ ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡಿದ್ದು ಸಾಬೀತಾಗಿದೆ. ರಹಸ್ಯ ಹೋಗಿ ಬಹಿರಂಗ ಮತದಾನವಾದರೂ ಕ್ರಮಕ್ಕೆ ಮುಂದಾಗಿಲ್ಲ. ವಿರೋಧ ಪಕ್ಷದವರು ಮತಗಟ್ಟೆ ಪಕ್ಕದಲ್ಲಿ ನಿಂತರೆ ಕಾನೂನಿನ ಬೆದರಿಕೆ ಹಾಕಿಸಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಗಳು ಇವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.