ರು. 45 ಸಾವಿರ ವಶ
ಗದಗ: ಬೆಟಗೇರಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಎರಡು ಕಡೆಗಳಲ್ಲಿ ದಾಳಿ ನಡೆಸಿ ರು. 45 ಸಾವಿರ ವಶಪಡಿಸಿಕೊಂಡ ಘಟನೆ ಭಾನುವಾರ ಜರುಗಿದೆ. ಬೆಟಗೇರಿಯ ಕುರಹಟ್ಟಿ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಹಂಚಲು ತಂದಿದ್ದ ರು. 15 ಸಾವಿರ ವಶಪಡಿಸಿಕೊಂಡಿದ್ದು, ಹಂಚಲು ಬಂದಿದ್ದ ಶ್ರೀನಿವಾಸ ಈಳಗೇರ, 3 ಮೊಬೈಲ್ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಬೆಟಗೇರಿಯ ಮಂಜುನಾಥ ನಗರದ ಕಣವಿ ಪ್ಲಾಟ್ನಲ್ಲಿ ಐ.ಜೆ. ಗದ್ಯಾಳ ನೇತೃತ್ವದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ರು. 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹೆಬಸೂರ ಲೈನ್, ಹೊನ್ನತ್ತೆಮ್ಮ ಗುಡಿಲೈನ್, ವಿಭೂತಿ ಓಣಿ, ನೆಹರು ಸ್ಕೂಲ್, ಪಿಂಜಾರ ಓಣಿ, ಎಲಿಗಾರ ಪ್ಲಾಟ್, ಜನತಾ ಪ್ಲಾಟ್, ಉಸುಗಿನಕಟ್ಟಿ, ಎಸ್ಟಿಡಿ ಲೈನ್, ಬಾಲವಡಿ, ನೂರಾನಿ, ಮಸೂತಿ, ಈಟಿಯವರ ಲೈನ್, ಸೋಮನಗೌಡ್ರ ಲೈನ್, ಶರಾಫ ಬಜಾರ, ಮುರಳಿಯವರ ಲೈನ್, ಚವ್ಹಾಣದವರ ಲೈನ್, ಕಾಗದಗೇರಿ, ಹಿಡ್ಕಿಮಠ ಲೈನ್, ಗಣೇಶಗುಡಿ ಲೈನ್ ಈ ಭಾಗಗಳಲ್ಲಿ ಸೋಮವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ
ಗದಗ: 2012-13ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ವಲಯದಲ್ಲಿ ಗಮನಾರ್ಹ, ಭಿನ್ನವಾದ ಸಾಧನೆಗೈದ, ಮಣ್ಣು ನೀರು ಮತ್ತು ನೈಸರ್ಗಿಕ ಸಂಪನ್ಮೂಲ ಸದ್ಭಳಕೆಯಿಂದ ಸಾಗುವಳಿಯಲ್ಲಿ ಅಧಿಕ ಗುಣಮಟ್ಟದ ಉತ್ಪಾದನೆ ಬರುವಂತೆ ಬದಲಾವಣೆ ತಂದಿರುವ ವ್ಯಕ್ತಿಗಳಿಂದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಅಥವಾ ಅಂಗ ಸಂಸ್ಥೆಗಳಿಂದ ಈ ಸಾಧನೆಗೆ ಈಗಾಗಲೇ ಪುರಸ್ಕೃತರಾದವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮತ್ತು ಸರ್ಕಾರದ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾದವರು ಈ ಪ್ರಶಸ್ತಿಗೆ ಅರ್ಹರಲ್ಲ. ಪ್ರಶಸ್ತಿಯ ವಿವರ ಮತ್ತು ಅರ್ಜಿ ನಮೂನೆಗಳನ್ನು ಸಂಬಂಧಿತ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು. ನಾಮ ನಿರ್ದೇಶನ ಪತ್ರಗಳನ್ನು ಕಡ್ಡಾಯವಾಗಿ ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯಗಳ ತಜ್ಞರ ಶಿಫಾರಸ್ಸಿನೊಂದಿಗೆ ಜಂಟಿ ಕೃಷಿ ನಿರ್ದೇಶಕರು (ವಿಸ್ತರಣೆ ಮತ್ತು ತರಬೇತಿ) ಕೃಷಿ ಇಲಾಖೆ, ಶೇಷಾದ್ರಿ ರಸ್ತೆ, ಬೆಂಗಳೂರು-560001 ಇವರಿಗೆ ಮೇ 21ರೊಳಗೆ ತಲುಪುವಂತೆ ಕಳಿಸಲು ಕೋರಿದೆ. ಅರ್ಜಿ ನಮೂನೆಯನ್ನು ಇಲಾಖೆ ವೆಬ್ಸೈಟ್ httpzzzraitamitra.kar.nic.in ನಲ್ಲಿ ಕ್ಲಿಕ್ಕಿಸಿ ಟೆಂಡರ್ ಪ್ರಕಟಣೆ ಮೆನುವಿನ ಸಬ್ಮೆನುವಿನಲ್ಲಿ ಕೃಷಿ ಪಂಡಿತ ಪ್ರಶಸ್ತಿ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.