ಸುವ್ಯವಸ್ಥಿತ ಚುನಾವಣೆ
ಮುಂಡರಗಿ: ಶಿರಹಟ್ಟಿ ಮೀಸಲು ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಭಾನುವಾರ ಮುಂಡರಗಿ ತಾಲೂಕಿನಲ್ಲಿ ಶಾಂತಿಯುತವಾದ ಮತದಾನ ನಡೆದಿದೆ.
ಶಿರಹಟ್ಟಿ ಮತಕ್ಷೇತ್ರಕ್ಕೆ ಬರುವ ಮುಂಡರಗಿ ತಾಲೂಕಿನ ಕಲಕೇರಿ, ಕೊರ್ಲಹಳ್ಳಿ, ಹಮ್ಮಿಗಿ, ಶಿಂಗಟಾಲೂರು ಗ್ರಾಮ ಹಾಗೂ ಮುಂಡರಗಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೂ ಬಿರುಸಿನ ಮತದಾನ ನಡೆಯಿತು. ತಾಲೂಕಿನ ಮಕ್ತುಂಪುರ, ಬೀಡನಾಳ, ಬೆಣ್ಣಿಹಳ್ಳಿ, ಬೀಡನಾಳ ತಾಂಡಾ, ವಿರೂಪಾಪುರ, ವಿರೂಪಾಪುರ ತಾಂಡಾ, ಬೂದಿಹಾಳ, ಹೆಸರೂರ, ನಾಗರಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೂ ಮತದಾನ ಬಹುತೇಕವಾಗಿ ನೀರಸವಾಗಿ ಕಂಡುಬಂದಿತು. ಮಧ್ಯಾಹ್ನದ ನಂತರ ರೋಣ ಮತಕ್ಷೇತ್ರಕ್ಕೆ ಬರುವ ಮುಂಡರಗಿ ತಾಲೂಕಿನ ಮುರುಡಿ, ಮುರುಡಿತಾಂಡಾ ಗ್ರಾಮದಲ್ಲಿ ಒಟ್ಟು 1770 ಮತದಾರರಿದ್ದು, ಶೇ 84.46 ರಷ್ಟು (1495) ಮತದಾನವಾಗಿದೆ. ಅದೇ ರೀತಿ ಶಿರಹಟ್ಟಿ ಮತಕ್ಷೇತ್ರಕ್ಕೆ ಬರುವ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಒಟ್ಟು 980 ಮತದಾರರಿದ್ದು, 790 ಮತದಾನವಾಗಿ ಶೇ. 80ರಷ್ಟು ಮತದಾನವಾಗಿದೆ.
ಮುಂಡರಗಿ ಪಟ್ಟಣದಲ್ಲಿ ಸಂಜೆ 4 ಗಂಟೆ ವೇಳೆಗೆ ಎಲ್ಲ ಬೂತ್ಗಳಲ್ಲಿಯೂ ಬಿರುಸಿನ ಮತದಾನ ನಡೆಯಿತು. 6 ಗಂಟೆಗೆ ಮುಗಿಯಬೇಕಾಗಿದ್ದ ಮತದಾನ 6-20ರ ವರೆಗೆ ನಡೆಯಿತು. ಸಾಕಷ್ಟು ಬಿಸಿಲಿನ ಮಧ್ಯದಲ್ಲಿಯೂ ಸಹ ಮತದಾರರು ಹಾಗೂ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಓಡಾಡಿದ್ದು ಕಂಡು ಬಂದಿತು.