ಅಭ್ಯರ್ಥಿಗಳ ಚಿತ್ತ ಮತಯಂತ್ರದತ್ತ...
-ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಭಾನುವಾರ ಚುನಾವಣೆ ಸುಸೂತ್ರವಾಗಿ ಮುಗಿದಿದೆ. ಮತಂತ್ರ ದೋಷ, ಮತದಾರರ ಪಟ್ಟಿಯಲ್ಲಿ ಹೆಸರು ಮಾಯ, ಸತ್ತವರ ಹೆಸರೂ ಪ್ರತ್ಯಕ್ಷ, ಹೊಸದಾಗಿ ಸೇರ್ಪಡೆಯಾದವರ ಹೆಸರು ಬೇರಾವುದೋ ಮತಗಟ್ಟೆಯ ಮತಪಟ್ಟಿಯಲ್ಲಿ ಇರುವುದು ಇತ್ಯಾದಿ ಲೋಪಗಳ ನಡುವೆಯೂ ಶಾಂತಿಯುತ ಮತದಾನ ಆಗಿದೆ. ಭಾವೈಕ್ಯಕ್ಕೆ ಹೆಸರಾದ ಶಿರಹಟ್ಟಿಯ ಮತದಾರರು ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎನ್ನುವಂತೆ ಚುನಾವಣೆ ಮುಗಿದರೂ ಅದರ ಗುಂಗು ಇನ್ನೂ ಇಳಿದಿಲ್ಲ. ಅಭ್ಯರ್ಥಿಗಳು ಗೆಲುವಿನ ಗುಣಾಕಾರ, ಭಾಗಾಕಾರದಲ್ಲಿ ತೊಡಗಿದ್ದಾರೆ. ಆ ಓಣಿಯಲ್ಲಿ ಅಷ್ಟು ಮತಗಳು ಬಂದಿವೆ, ಈ ಓಣಿಯಲ್ಲಿ ಇಷ್ಟು ಬಿದ್ದಿವೆ, ಅವರು ನಮಗೆ ಮತ ಹಾಕಿಲ್ಲ. ಕೊನೆ ಗಳಿಗೆಯಲ್ಲಿ ಮತದಾರರನ್ನು ಭೇಟಿಯಾಗಲು ಸಮಯ ಸಾಲದೆ ಕೆಲವು ಮತಗಳು ನಮ್ಮ ಪಕ್ಷಕ್ಕೆ ಬಂದಿಲ್ಲ ಎಂಬ ಲೆಕ್ಕಾಚಾರ ಸಾಗಿದೆ. ಎಲ್ಲ ಅಭ್ಯರ್ಥಿಗಳ ಚಿತ್ತ ಮತಯಂತ್ರಗಳತ್ತ ನೆಟ್ಟಿದೆ. ಮತದಾರರ ತೀರ್ಪು ಈ ಮತಯಂತ್ರಗಳಲ್ಲಿ ಭದ್ರವಾಗಿದೆ. ಬುಧವಾರ (ಮೇ 8) ಅದು ಬಹಿರಂಗವಾಗಲಿದೆ. ಅಂದು ಯಾರ ಪಾಲಿಗೆ ಶುಭ, ಯಾರಿಗೆ ಅಶುಭ ಎಂಬ ನಿರೀಕ್ಷೆ ಸಹಜವಾಗಿಯೇ ಎಲ್ಲರಲ್ಲೂ ಇದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ತಮ್ಮ ಇಷ್ಟದೇವರ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ಕಾರ್ಯಕರ್ತರು ಮತ್ತು ಪಕ್ಷಗಳ ಬೆಂಬಲಿಗರು ಪಂಚಾಯತಿ ಸೇರಿ ಮತಗಳ ಲೆಕ್ಕ ಹಾಕುತ್ತಿದ್ದಾರೆ. ಭಾನುವಾರ ನಡೆದ ಮತದಾನದಲ್ಲಿ 69,381 ಪುರುಷರು ಹಾಗೂ 61,351 ಮಹಿಳೆಯರು ಸೇರಿ ಒಟ್ಟು 1,30,732 ಜನ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಶೇ. 71.55 ಮತದಾನವಾದ ಬಗ್ಗೆ ವರದಿಯಾಗಿದೆ. ಶಿರಹಟ್ಟಿ ಪಟ್ಟಣದಲ್ಲಿ ಮಧ್ಯಾಹ್ನದಿಂದ ಸಂಜೆ 6.30ರ ವರೆಗೂ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಬಾರಿಗೆ ಮತ ಹಾಕಲು ಬಂದ ಯುವಜನತೆ ಮತಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಚುನಾವಣಾಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.