ಅಭ್ಯರ್ಥಿಗಳಲ್ಲಿ ಆತಂಕ
ಕನ್ನಡಪ್ರಭ ವಾರ್ತೆ, ಗದಗ, ಮೇ 6
ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ. ಫಲಿತಾಂಶದ ಬಗ್ಗೆ ಸಾಕಷ್ಟು ಚರ್ಚೆ, ನಿರೀಕ್ಷೆ, ವಿಮರ್ಶೆಗಳು ಕೇಳಿಬರುತ್ತಿವೆ. ಮಾ 20ರಿಂದ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದ ಕಾರ್ಯಕರ್ತರು ಈಗ ನಿರಾಳರಾಗಿದ್ದಾರೆ. ಆದರೆ, ಅಭ್ಯರ್ಥಿಗಳ ಆತಂಕ ಕ್ಷಣ ಕ್ಷಣವೂ ಹೆಚ್ಚುತ್ತಿದೆ. ಎಲ್ಲರ ಗಮನ ಮೇ 8ರ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ.
2008ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಜಿಲ್ಲೆಯ 4 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಸಾಧನೆಗಳ ಆಧಾರದಲ್ಲಿ ಮತ್ತೆ 4 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದ್ದರೆ, ಜನತೆ ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಗದಗ, ಬೆಟಗೇರಿ ಅವಳಿ ನಗರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲೆಯಲ್ಲಿ 2 ಸ್ಥಾನಗಳಲ್ಲಿ ಜಯ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿರುಸಿನ ಚರ್ಚೆ: ಜಿಲ್ಲೆಯ ಪ್ರತಿ ಗ್ರಾಮದ ಕಟ್ಟೆಗಳು, ಚಹಾ ಅಂಗಡಿಗಳು, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ - ಎಲ್ಲ ಕಡೆಗಳಲ್ಲೂ ರಾಜಕೀಯ ವಿಷಯವೇ ಚರ್ಚಿತವಾಗುತ್ತಿದೆ. ಎಲ್ಲೆಲ್ಲಿ ಯಾವ ಪಕ್ಷಗಳು ಗೆಲ್ಲುತ್ತವೆ, ಅದಕ್ಕಾಗಿ ಅವರು ಮಾಡಿದ ತಂತ್ರಗಾರಿಕೆ, ಮತ ಸೆಳೆಯಲು ಅನುಸರಿಸಿದ ಕ್ರಮ, ಜಾತಿ ಲೆಕ್ಕಾಚಾರ, ಯಾವ ವಿಷಯಗಳು ಅಭ್ಯರ್ಥಿಗಳಿಗೆ ಪೂರಕ ಹಾಗೂ ಮಾರಕವಾಗಿವೆ ಎಂಬುದು ಚರ್ಚೆಯ ತಿರುಳು. ಪ್ರತಿಯೊಬ್ಬರೂ ತಮ್ಮ ತಮ್ಮ ದೃಷ್ಟಿಕೋನದಲ್ಲಿ ಅಭ್ಯರ್ಥಿಗಳ ಗೆಲುವು, ಸೋಲನ್ನು ನಿರ್ಧರಿಸುತ್ತಿದ್ದಾರೆ.
ಕಾರ್ಯಕರ್ತರು ನಿರಾಳ: ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬೆನ್ನಲ್ಲೇ ವಿಧಾನಸಭಾ ಚುನಾವಣೆಯನ್ನೂ ಘೋಷಿಸಿದ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರಿಗೂ ಹೆಚ್ಚಿನ ಬೇಡಿಕೆ ಬಂದಿತ್ತು. ಈ ಹಿಂದೆ ಮು ಖಂಡರನ್ನು ಹುಡುಕಿಕೊಂಡು ಕಾರ್ಯಕರ್ತರು ಬರುತ್ತಿದ್ದರು. ಒಂದಾದ ಮೇಲೆ ಒಂದು ಚುನಾವಣೆ ಬಂದ ಹಿನ್ನೆಲೆಯಲ್ಲಿ ಮುಖಂಡರೇ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗಿ ಅವರನ್ನು ಪ್ರಚಾರಕ್ಕೆ ಕರೆತಂದಿದ್ದಾರೆ. ಸತತ ದುಡಿಮೆ ಕಾರ್ಯಕರ್ತರಲ್ಲಿ ದಣಿವು ಹಾಗೂ ಬೇಸರ ಮೂಡಿಸಿತ್ತು. ಶಾಂತಿಯುತವಾಗಿ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
ಅಭ್ಯರ್ಥಿಗಳಲ್ಲಿ ಆತಂಕ: ಮತದಾನ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜನರು, ಕಾರ್ಯಕರ್ತರು ದಿನ ನಿತ್ಯದ ಗೊಂದಲದಿಂದ ನಿಟ್ಟುಸಿರು ಬಿಟ್ಟಿದ್ದರೆ, ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ 4 ಕ್ಷೇತ್ರಗಳ ವ್ಯಾಪ್ತಿಯಲ್ಲಿ 47 ಅಭ್ಯರ್ಥಿಗಳ ಕಣದಲ್ಲಿದ್ದು, ಅವರ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಅಭ್ಯರ್ಥಿಗಳು ಪ್ರತಿ ಕ್ಷಣವನ್ನು ಆತಂಕ, ದುಗುಡದಲ್ಲಿಯೇ ಕಳೆಯುತ್ತಿದ್ದಾರೆ. ಮತ್ತೆ ಕೆಲವರು ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಆಚರಣೆಗಳಲ್ಲಿ ತಲ್ಲೀನರಾಗಿರುವುದು ಅವರ ಆತಂಕಕ್ಕೆ ಸಾಕ್ಷಿಯಾಗಿದೆ.
- ಶಿವಕುಮಾರ ಕುಷ್ಟಗಿ