ಗೆಲ್ಲುವ ಹುಮ್ಮಸ್ಸಿನಲ್ಲಿ ಈಜು-ಮೋಜು
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 6
ವಿಧಾನಸಭಾ ಚುನಾವಣೆಗೆ ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಏ. 6ರಂದು ಘೋಷಣೆ ಆದಾಗಿನಿಂದ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಮಕೃಷ್ಣ ದೊಡ್ಡಮನಿ ಮೇ 5ರ ಮತದಾನದ ಬಳಿಕ ನಿರಾಳರಾಗಿದ್ದಾರೆ. ಸೋಮವಾರ ಬೆಳಗ್ಗೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಅಳಿಯರು ಹಾಗೂ ಸ್ನೇಹಿತರೊಂದಿಗೆ ಈಜುಗೊಳಕ್ಕೆ ತೆರಳಿ, ಈಜಾಡುತ್ತ ಮೋಜಿನಲ್ಲಿ ತೊಡಗಿದ್ದರು.
ಟಿಕೆಟ್‌ಗಾಗಿ ಶ್ರಮಿಸಿದ ಫಲವಾಗಿ ಅಧಿಕೃತ ಅಭ್ಯರ್ಥಿಯಾಗಿ ದೊಡ್ಡಮನಿ ಘೋಷಣೆಯಾದರು. ಅಂದಿನಿಂದಲೂ ಶಿರಹಟ್ಟಿ ಕ್ಷೇತ್ರಕ್ಕೆ ಬರುವ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನ ಕೆಲವು ಭಾಗಗಳಿಗೆ ನಿರಂತರವಾಗಿ ಭೇಟಿ ನೀಡಿ, ಮತದಾರರನ್ನು ಮಾತನಾಡಿಸಿದರು. ಈ ಆಯಾಸ ಕಳೆಯಲು ಸೋಮವಾರ ಬೆಳಗ್ಗೆ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ರವೀಂದ್ರ ಉಪ್ಪಿನಬೆಟಗೇರಿ ಅವರ ಜಮೀನಿನಲ್ಲಿರುವ ಸ್ವಿಮಿಂಗ್ ಪೂಲ್‌ಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ತೆರಳಿದ ಅವರು, ಬಿಸಿಲು ಹಾಗೂ ಚುನಾವಣೆ ಕಾವನ್ನು ತಣಿಸಿಕೊಳ್ಳಲು ಯತ್ನಿಸಿದರು.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ರಾಮಕೃಷ್ಣ ದೊಡ್ಡಮನಿ, ಚುನಾವಣೆ ನಿಗದಿಯಾದಾಗಿನಿಂದಲೂ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಅತಿ ಹೆಚ್ಚು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಭಾನುವಾರ ಮತದಾನವಾದ ಹಿನ್ನೆಲೆಯಲ್ಲಿ ಎಲ್ಲ ವಿಚಾರಗಳನ್ನು ಬದಿಗಿಟ್ಟು ತಾವು ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಈಜಾಟದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.
ಎ.ಪಿ. ದಂಡಿನ, ವೀರೇಶ ಕುಬಸದ, ಧೃವಕುಮಾರ ಹೊಸಮನಿ, ಶೇಖರಾಜ ಹೊಸಮನಿ, ಲೋಕೇಶ ದೊಡ್ಡಮನಿ, ಶಶಿಧರ ಹೊಸಮನಿ ಪಾಲ್ಗೊಂಡಿದ್ದರು.