ನಾಲ್ಕು ಮದುವೆಗೆ ಹಾಜರಾದ ಎಚ್ಕೆ
ಗದಗ: ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಸೋಮವಾರ ಬೆಳಗ್ಗೆ ದಿನಪತ್ರಿಕೆ ಓದುವ ಮೂಲಕ ದಿನಚರಿ ಆರಂಭಿಸಿದರು. 9ರಿಂದ ಭೇಟಿಗೆ ಬಂದ ಕಾರ್ಯಕರ್ತರ ಜತೆ ಹಲವಾರು ವಿಚಾರಗಳನ್ನು ಚರ್ಚಿಸಿದರು. ಉಪಾಹಾರ ಮುಗಿಸಿ, ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಮತದಾನದ ವೇಳೆ ಆಗಿರುವ ಪ್ರಮುಖ ಘಟನಾವಳಿಗಳ ಬಗ್ಗೆ ಮಾಹಿತಿ ಪಡೆದರು. ಆಮೇಲೆ ಗದುಗಿನಲ್ಲಿ 4 ಮದುವೆ ಸಮಾರಂಭಗಳಿಗೆ ಭೇಟಿ ನೀಡಿ, ವಧೂ-ವರರಿಗೆ ಶುಭ ಹಾರೈಸಿದರು. ಮಧ್ಯಾಹ್ನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದರು. ಸಂಜೆಯ ವೇಳೆಗೆ ಮತ್ತೆ ಕಾರ್ಯಕರ್ತರು, ಮುಖಂಡರ ಜತೆ ಸಮಾಲೋಚಿಸಿದರು. ಸಹಕಾರಿ ಇಲಾಖೆಯ ಕೆಲ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಸಹಕಾರಿ ಬ್ಯಾಂಕ್ಗಳ ಕುರಿತು ಚರ್ಚೆ ನಡೆಸಿದರು.
ಸಾಕ್ಷರತೆ ಶಕ್ತಿ ಶಿಕ್ಷಕರಲ್ಲಿದೆ: ಶಿವಪ್ಪಗೌಡರ
ಗಜೇಂದ್ರಗಡ: ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಂಪಾದಿಸಿ ಸಮುದಾಯದ ಸರ್ವರನ್ನೂ ಸಾಕ್ಷರರನ್ನಾಗಿಸುವ ಮಹತ್ವದ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಗಜೇಂದ್ರಗಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಸಿ.ಸಿ. ಶಿವಪ್ಪಗೌಡರ ಹೇಳಿದರು. ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಪ್ರಾಚಾರ್ಯ ವಿ.ಎಸ್. ರಾಯನಗೌಡರಿಗೆ ಸಂಸ್ಥೆಯ ವತಿಯಿಂದ ನಡೆದ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾಷಾ ಪ್ರಭುತ್ವ, ಜ್ಞಾನ, ಸಚ್ಚಾರಿತ್ರ್ಯ ಶಿಕ್ಷಕನಿಗೆ ಅವಶ್ಯವಾದ ಗುಣಗಳು. ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡು ಮಕ್ಕಳಿಗೆ ಬೋಧಿಸಿದಾಗ ವಿದ್ಯಾರ್ಥಿ ದೇಶದ ಸತ್ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು.