ಮತದಾನ ಸುಸೂತ್ರ: ಜಿಲ್ಲಾಧಿಕಾರಿ ಅಭಿನಂದನೆ
ಗದಗ: ಮೇ 5ರಂದು ನಡೆದ ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಅಂಜನಕುಮಾರ್ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು ಮತದಾನ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗವಹಿಸಿದ ಎಲ್ಲ ಅಧಿಕಾರಿಗಳಿಗೆ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕಳೆದ ಬಾರಿಗಿಂತ ಈ ಸಲದ ಚುನಾವಣೆಯಲ್ಲಿ ಶೇ.7ರಷ್ಟು ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 65.8ರಷ್ಟು ಮತದಾನ ನಡೆದಿತ್ತು. ಪ್ರಸ್ತುತ ಚುನಾವಣೆಯಲ್ಲಿ ಶೇ. 72.90ರಷ್ಟಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ಶೇ. 71.55, ಗದಗ ಕ್ಷೇತ್ರದಲ್ಲಿ ಶೇ. 70.80, ರೋಣ ಕ್ಷೇತ್ರದಲ್ಲಿ ಶೇ. 74.35 ಹಾಗೂ ನರಗುಂದ ಕ್ಷೇತ್ರದಲ್ಲಿ 74.98 ರಷ್ಟು ಮತದಾನವಾಗಿದೆ. ಮತದಾನದ ನಂತರ ಎಲ್ಲ ಮತಗಟ್ಟೆಗಳನ್ನು ನಗರದ ಜ. ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯವಸ್ಥಿತವಾಗಿ ಪೊಲೀಸ್ ಬಿಗಿಭದ್ರತೆಯೊಂದಿಗೆ ಕಾಯ್ದಿರಿಸಲಾಗಿದೆ. ಮತಯಂತ್ರಗಳ ಭದ್ರತೆಗೆ ಪೊಲೀಸ್ ಇನ್ಸ್ಪೆಕ್ಟರ್-4, ಪೊಲೀಸ್ ಸಬ್ಇನ್ಸ್ಪೆಕ್ಟರ್-12, ಸಹಾಯಕ ಸಬ್ಇನ್ಸ್ಪೆಕ್ಟರ್-18, ಪೊಲೀಸ್ ಪೇದೆಗಳು-106 ಸಿಬ್ಬಂದಿ ಜತೆಗೆ ಸಿಆರ್ಪಿಎಫ್ನ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಮೇ 8ರಂದು ಬೆಳಗ್ಗೆ 8ರಿಂದ ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಮತಎಣಿಕೆ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್-7, ಪೊಲೀಸ್ ಸಬ್ಇನ್ಸ್ಪೆಕ್ಟರ್-13, ಸಹಾಯಕ ಸಬ್ಇನ್ಸ್ಪೆಕ್ಟರ್-26, ಪೊಲೀಸ್ ಪೇದೆಗಳು-250 ಸಿಬ್ಬಂದಿಗಳ ಜತೆಗೆ ಸಿಆರ್ಪಿಎಫ್ನ ಒಂದು ಕಂಪನಿಯನ್ನೂ ಸಹ ನಿಯೋಜಿಸಲಾಗಿದೆ.
ಮತ ಎಣಿಕೆಗೆ ಅನುಕೂಲವಾಗುವಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾದ 2 ಕೊಠಡಿ ಹಾಗೂ ಒಂದು ಪೂರಕ ಕೊಠಡಿಗಳನ್ನು ಕಾಯ್ದಿರಿಸಿದ್ದು, ಮೊದಲ ಕೊಠಡಿಯಲ್ಲಿ 10 ಹಾಗೂ 2ನೇ ಕೊಠಡಿಯಲ್ಲಿ 7ರಂತೆ ಒಟ್ಟು 66 ಟೇಬಲ್ಗಳನ್ನು ಹಾಕಲಾಗಿದೆ. ವ್ಯವಸ್ಥಿತವಾಗಿ ಮತ ಎಣಿಕೆ ಮಾಡಲು ಮೇಲ್ವಿಚಾರಕರು, ಸಹಾಯಕ ಮೇಲ್ವಿಚಾರಕರು ಹಾಗೂ ಎಣಿಕೆ ಕಾರ್ಯಕ್ಕಾಗಿ ಒಟ್ಟು 243 ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ವಾಹನ ವಜ್ರ, ಅಂಬುಲೆನ್ಸ್, ಫೈರ್ಫೈಟರ್ಸನ್ನು ನಿಯೋಜಿಸಲಾಗಿದೆ. ಇದರ ನಿಗಾವಹಿಸಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.