ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆಹಾ ಮಾವು, ಬೆಲೆ ಕೇಳಿದರೆ ನೋವು!

Vishwanath S
Updated On : 8 May 2013, 3:32 am

ಕನ್ನಡಪ್ರಭ ವಾರ್ತೆ, ಗದಗ, ಮೇ 7
ಹಣ್ಣುಗಳ ರಾಜಾ ಎಂದರೆ ಎಲ್ಲರಿಗೂ ನೆನಪಾಗುವುದು ಮಾವಿನ ಹಣ್ಣು. ಸದ್ಯ ಮಾವಿನ ಹಣ್ಣು ಜಿಲ್ಲೆಯಾದ್ಯಂತ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಬೇಸಿಗೆಯ ಬಿಸಿಲಿನಿಂದ ದಾಹ ತಣಿಸಿಕೊಳ್ಳಲು ಹೆಚ್ಚಾಗಿ ಜನತೆ ತಂಪು ಪಾನೀಯ, ಹಣ್ಣುಗಳ ಮೊರೆ ಹೋಗುವುದು ಸಹಜ. ಈ ಬೇಸಿಗೆಯ ದಿನಗಳಲ್ಲಿಯೇ ಹೆಚ್ಚಿನ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಈ ಹಣ್ಣನ್ನೇ ಸೇವಿಸಿ ತಮ್ಮ ದೇಹ ತಂಪಾಗಿಸಿಕೊಳ್ಳುತ್ತಿದ್ದಾರೆ.
ಮಾವಿನ ಹಣ್ಣು ಬೇಸಿಗೆ ಕಾಲದಲ್ಲಿ ಹಣ್ಣಿನ ಪ್ರೀಯರಿಗೆ ವರವಾಗಿ ಪರಿಣಮಿಸಿದಂತಿದೆ. ಆದರೆ, ಇವುಗಳ ಬೆಲೆ ಮಾತ್ರ ದುಬಾರಿಯಾಗಿದ್ದು, ಹಣ್ಣು ಕೊಂಡುಕೊಳ್ಳಲು ಹೋದವರು ಬೆಲೆ ಕೇಳಿ ಹುಬ್ಬೇರಿಸುವಂತಾಗಿದೆ.
ಜಿಲ್ಲೆಯಲ್ಲಿ ಬಿಸಿಲಿನ ಪ್ರಕರತೆ ಕಳೆದ ಬಾರಿಗಿಂತಲೂ ಹೆಚ್ಚಾಗಿದೆ. 15 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಲ್ಲಿ ನೋಡಿದರೂ ಈ ಮಾವು ಮಾರಾಟ ಮಾಡುವ ವ್ಯಾಪಾರಸ್ಥರೇ ಕಾಣಸಿಗುತ್ತಿದ್ದಾರೆ. ಆದರೆ, ಹಣ್ಣಿನ ಸುವಾಸನಗೆ ಮನಸೋತು ಕೊಂಡು ಕೊಳ್ಳಲು ಹೋಗಿ ಬೆಲೆ ಕೇಳಿ ದಂಗಾಗುತ್ತಿದ್ದಾರೆ. ಕೆಲವರು ಬೆಲೆ ಕೇಳಿ ಬೇಸರಪಟ್ಟು ಹಾಗೇ ತೆರಳಿದರೆ, ಮತ್ತೆ ಕೆಲವರು ರುಚಿ ನೊಡಿಯೇ ಬಿಡೋಣವೆಂದು ತೆಗೆದುಕೊಂಡು ಹೋಗುತ್ತಿದ್ದಾರೆ.
ವಿವಿಧ ತಳಿಯ ಹಣ್ಣು: ಹಣ್ಣುಗಳ ರಾಜನೆಂದೆ ಪ್ರಸಿದ್ಧಿ ಪಡೆದ ಮಾವಿನಲ್ಲಿಯೂ ಹಲವು ತಳಿಯ ಮಾವಿನ ಹಣ್ಣುಗಳು ಕಾಣಸಿಗುತ್ತಿವೆ. ಆಪುಸ್, ನೀಲಂ, ಕಲ್ಮಿ, ತೋತಾಪುರಿ, ನಾಟಿ, ಜಂತೂರ, ಸಿಂಧನೂರ ಸೇರಿದಂತೆ ಹಲವು ತಳಿಯ ಮಾವುಗಳಿವೆ.
ಆದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾಗಿ ಆಪುಸ್, ಕಲ್ಮಿ ಸೇರಿದಂತೆ ಸ್ಥಳೀಯ ತಳಿಯ ಮಾವುಗಳು ಹೆಚ್ಚಾಗಿ ಸಿಗುತ್ತಿವೆ. ಹಲವು ತಳಿಯ ಮಾವಿನ ಹಣ್ಣುಗಳನ್ನು ಬೆಳಗಾವಿ, ಧಾರವಾಡ ಜಿಲ್ಲೆಗಳು, ಸಿಂಧನೂರ ತಾಲೂಕು ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಗದಗ ಜಿಲ್ಲೆಗೆ ತಂದು ಮಾರಾಟ ಮಾಡಲಾಗುತ್ತಿದೆ.
ಮಾರಾಟ ಜೋರು: ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಮಾವಿನ ಹಣ್ಣು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಸ್ಥರೇ ಕಾಣಸಿಗುತ್ತಿದ್ದಾರೆ. ನಗರದ ಗಾಂಧಿವೃತ್ತದ ಎಡ ಮತ್ತು ಬಲಭಾಗ, ಕೆ.ಸಿ. ರಾಣಿ ರಸ್ತೆ, ಮುಳಗುಂದ ನಾಕಾ, ಭೂಮರಡ್ಡಿ ವೃತ್ತ, ಬಸ್‌ನಿಲ್ದಾಣದ ರಸ್ತೆ, ಸ್ಟೇಷನ್ ರಸ್ತೆ, ರಾಜೀವಗಾಂಧಿ ನಗರ, ಹಳೆ ಡಿ.ಸಿ. ಆಫೀಸ್, ಕಾಯಿಪಲ್ಲೆ ಮಾರುಕಟ್ಟೆ, ಟಾಂಗಾಕೂಟ ವೃತ್ತದ ಸಂಪೂರ್ಣ ರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ಮಾವಿನಹಣ್ಣು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸ್ಥಳೀಯ ಹಣ್ಣಿಗೆ ಬೇಡಿಕೆ ಹೆಚ್ಚು: ಸ್ಥಳೀಯ ಹಣ್ಣುಗಳಿಗೂ ಬೇರೆ ಊರಿನಿಂದ ತರುವ ಹಣ್ಣುಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಸ್ಥಳೀಯ ಹಣ್ಣುಗಳಿಗೆ ಒಂದು ಡಜನ್‌ಗೆ ರು. 80-150, ಬೇರೆ ನಗರ ಪ್ರದೇಶಗಳಿಂದ ತರಲಾಗುತ್ತಿರುವ ಮಾವಿನ ಹಣ್ಣುಗಳಿಗೆ ಒಂದು  ಡಜನ್‌ಗೆ ರು. 120-200. ಹಾಗಾಗಿ ಸ್ಥಳೀಯ ಹಣ್ಣಿಗೆ ಸ್ವಲ್ಪ ಬೆಲೆ ಕಡಿಮೆ ಇರುವುದರಿಂದ ಇವುಗಳಿಗೆ ಬೇಡಿಕೆ ಹೆಚ್ಚಿದೆ.

-ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement