ರೋಣ: ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 83.44
ರೋಣ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರೋಣ ತಾಲೂಕಿಗೆ ಶೇ. 83.44ರಷ್ಟು ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಪರೀಕ್ಷೆ ಬರೆದವರು 3,389 ಈ ಪೈಕಿ 1862 ಬಾಲಕರು ಹಾಗೂ 1526 ಬಾಲಕಿಯರು. ಇವರಲ್ಲಿ 2828 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿ ಶಾಲೆಗಳು ಫಲಿತಾಂಶದ ಮುಂಚೂಣಿಯಲ್ಲಿವೆ. 10 ಪ್ರೌಢಶಾಲೆಗಳು ಶೇ. 100 ಫಲಿತಾಂಶ ಗಳಿಸಿವೆ. ಸಂಜಯ ಗ್ರಾಮೀಣ ಪ್ರೌಢಶಾಲೆ, ಹೊಳೆ ಆಲೂರ, ಎಸ್ಎವಿ ಹೆಣ್ಣು ಮಕ್ಕಳ ಪ್ರೌಢಶಾಲೆ, ನರೇಗಲ್, ಫಲಹಾಲೇಶ್ವರ ಪ್ರೌಢಶಾಲೆ, ಅಸೂಟಿ, ಸರ್ಕಾರಿ ಪ್ರೌಢಶಾಲೆ, ಬೇಲೇರಿ, ಟಿ.ವಿ. ರಾಯಬಾಗಿ ಪ್ರೌಢಶಾಲೆ, ಗಜೇಂದ್ರಗಡ, ಪಿಎಸ್ಎಸ್ ಪ್ರೌಢಶಾಲೆ, ನರೇಗಲ್, ಶಾರದಾ ಬಾಲಕಿಯರ ಪ್ರೌಢಶಾಲೆ, ರೋಣ, ನ್ಯೂ ಲಿಟಲ್ ಫ್ಲವರ್ ಪ್ರೌಢಶಾಲೆ, ರೋಣ, ಸರ್ಕಾರಿ ಪ್ರೌಢಶಾಲೆ, ಶಾಂತಗೇರಿ ಮತ್ತು ಆರ್ಎಂಎಸ್ಎ ಪ್ರೌಢಶಾಲೆ ಕಳಕಾಪುರ ಶೇ. 100 ಸಾಧನೆ ಮಾಡಿವೆ. ತಾಲೂಕಿನ ನರೇಗಲ್ ಎಸ್ಎವಿ ಪ್ರೌಢಶಾಲೆಯ ಸುಮತಿ ಲಿಂಗಯ್ಯ ಗೌರಿ 618 (ಶೇ. 98.88), ವೀರೇಶ ಸಾಲಿಮಠ 587 (ಶೇ. 93.92) ಮತ್ತು ದಿವ್ಯಾ ರಾಠೋಡ 585 (93.60) ತಾಲೂಕಿಗೆ ಮೊದಲ ಮೂರು ಸ್ಥಾನ ಗಳಿಸಿದ್ದು ವಿಶೇಷ. ಫಲಿತಾಂಶ ಕಳೆದ ವರ್ಷಕ್ಕಿಂತ ಸುಧಾರಿಸಿದ್ದು, ಈ ಚೇತರಿಕೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ ತಿಳಿಸಿದ್ದಾರೆ.
ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತ ಸಿದ್ಧ
ಹಾವೇರಿ: ಮೇ 5ರಂದು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿದ ಚುನಾವಣೆಯ ಮತಗಳ ಎಣಿಕೆ ಮೇ 8ರಂದು ನಗರದ ಹೊರ ವಲಯದಲ್ಲಿರುವ ಸರ್ಕಾರಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಆರಂಭಗೊಳ್ಳಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ಮಂಗಳವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮತ ಎಣಿಕೆ ಕೊಠಡಿಗಳನ್ನು ಅಣಿಗೊಳಿಸಲಾಗಿದ್ದು, ಈ ಕೊಠಡಿಗಳ ಎದುರಿಗಿರುವ ಸ್ಟ್ರಾಂಗ್ ರೂಂಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಲಾಗಿದೆ.
18 ಸುತ್ತು ಎಣಿಕೆ: ಬೆಳಗ್ಗೆ 7.30ಕ್ಕೆ ಮತ ಎಣಿಕೆಗೆ ನಿಯುಕ್ತಿಗೊಂಡ ಸಿಬ್ಬಂದಿ ಆಯಾ ಕೊಠಡಿಗಳಲ್ಲಿ ಎಣಿಕೆಗೆ ಸನ್ನದ್ಧರಾಗಿರುತ್ತಾರೆ. ವಿದ್ಯುನ್ಮಾನ ಮತಯಂತ್ರದ ಎಣಿಕೆಗೆ ಮುಂಚೆ 8 ಗಂಟೆಗೆ ಅಂಚೆಮತ ಪತ್ರಗಳ ಎಣಿಕೆ ನಡೆಸಲಾಗುವುದು. ಪ್ರತಿ ಟೇಬಲ್ಗೆ ಒಬ್ಬ ಎಣಿಕೆ ಸೂಪರ್ವೈಜರ್, ಎಣಿಕೆ ಸಹಾಯಕರು, ಒಬ್ಬ ಮೈಕ್ರೋ ವೀಕ್ಷಕರು ಮತ್ತು ಡಿ ದರ್ಜೆ ನೌಕರ ಇದ್ದು, ವಿದ್ಯುನ್ಮಾನ ಮತಯಂತ್ರದಲ್ಲಿನ ಮತ ಎಣಿಕೆ ನಿಭಾಯಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ರೋಣ: ಮನೆಯವರು ಬುದ್ದಿ ಹೇಳಿದ್ದನ್ನೇ ಬೇಸರ ಮಾಡಿಕೊಂಡು ಗೃಹಿಣಿಯೋರ್ವಳು ಮನೆಯಲ್ಲಿಯೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬಾಸಲಾಪುರ ರಸ್ತೆಯಲ್ಲಿನ ತೋಟದ ಮನೆಯಲ್ಲಿ ಮಂಗಳವಾರ ನಡೆದಿದೆ. ಮೃತ ಮಹಿಳೆಯನ್ನು ಕಸ್ತೂರೆವ್ವ (ನೀಲವ್ವ) ಮಲ್ಲನಗೌಡ್ರ (21) ಎಂದು ಗುರುತಿಸಲಾಗಿದೆ. ತವರು ಮನೆಗೆ ಬರುವ ವಿಚಾರವಾಗಿ ಸೋಮವಾರ ರಾತ್ರಿ ತಂದೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಬಳಿಕ ಈ ರೀತಿಯ ಘಟನೆ ನಡೆದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಎಂ.ಬಿ. ಪಾಟೀಲ್, ಸಿಪಿಐ ಮಲ್ಲನಗೌಡ ನಾಯಕ ಮತ್ತು ಪಿಎಸ್ಐ ಎಂ.ಎನ್. ಹತ್ತಿಕಟಗಿ ಭೇಟಿ ನೀಡಿ ಪರಿಶೀಲಿಸಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.