ವಾಹನ ಪಲ್ಟಿ: ಇಬ್ಬರ ಸಾವು
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 7
ಟಾಟಾ ಸುಮೋ ವಾಹನದ ಟೈರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿ ಇಬ್ಬರು ಮೃತಪಟ್ಟು, 8 ಜನ ಗಾಯಗೊಂಡಿರುವ ಘಟನೆ ಗೊಜನೂರ ಮತ್ತು ಮಾಗಡಿಯ ಮಧ್ಯೆ ಮಂಗಳವಾರ ಸಂಭವಿಸಿದೆ.
ಮೃತಪಟ್ಟವರು ಮುಳಗುಂದದ ಬೀಬಿಜಾನ್ ಕಮತಗಿ (50) ಹಾಗೂ ಮರೆಂಬಿ ನನ್ನೆಸಾಬ ಮಕಾಂದಾರ (65) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಳಗುಂದ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಇವರು ಹಾವೇರಿ ಜಿಲ್ಲೆಯ ಮುಗದೂರ ಗ್ರಾಮಕ್ಕೆ ವಲೀಮಾ ಕಾರ್ಯಕ್ಕೆ ಟಾಟಾ ಸುಮೋ ವಾಹನದಲ್ಲಿ ಹೊರಟಿದ್ದರು ಎನ್ನಲಾಗಿದೆ.
ಮೇ 6 ರಂದು ಮುಳಗುಂದ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮಂಗಳವಾರ ಮಧ್ಯಾಹ್ನ ಮುಳಗುಂದ ಗ್ರಾಮದಿಂದ ಮುಗದೂರ ಗ್ರಾಮಕ್ಕೆ ಹೊರಟ ಕೇವಲ 15 ನಿಮಿಷಗಳ ಅವಧಿಯಲ್ಲಿ ಅಪಘಾತ ನಡೆದಿದೆ. ತೀವ್ರ ಗಾಯಗೊಂಡಿದ್ದ ಮರೆಂಬಿ ಮಕಾಂದಾರ ಹಾಗೂ ಬೀಬಿಜಾನ ಕಮತಗಿಯವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. 8 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.