ನರಗುಂದ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 8
ರಾಜ್ಯದಲ್ಲಿ ಅತೀ ಕುತೂಹಲ ಕೆರಳಿಸಿದ್ದ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ 11 ಜನ ಸ್ಪರ್ಧಿಸಿದ್ದರು. ಅದರಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ರ ಮಧ್ಯ ನೇರ ಸ್ಪರ್ಧೆ ನಡೆದಿತ್ತು. ಬಿ.ಆರ್. ಯಾವಗಲ್ ಗೆಲವು ಸಾಧಿಸುತ್ತಿದ್ದಂತೆಯೇ ನರಗುಂದ ಪಟ್ಟಣ ಮತ್ತು ಕ್ಷೇತ್ರದ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜೋತ್ಸವ ಆಚರಿಸಿದರು.
ಈ ಹಿಂದಿನ 2 ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲರು ಶಾಸಕರಾಗಿ ಆಯ್ಕೆಯಾಗಿದ್ದರು. 2 ಅವಧಿ ಕಾಂಗ್ರೆಸ್ನ ಬಿ.ಆರ್. ಯಾವಗಲ್ ಅಧಿಕಾರ ಕೈ ತಪ್ಪಿದ್ದರಿಂದ ಇವರ ಹಿಂಬಾಲಕರಿಗೆ ಭಾರೀ ಹಿನ್ನಡೆ ಉಂಟಾಗಿತ್ತು.
ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಯಕರ್ತರು ಟ್ರ್ಯಾಕ್ಟರ್, ಬೈಕ್, ಜೀಪ್ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಯಘೋಷ ಹಾಕುತ್ತ ವಿಜಯೋತ್ಸವ ಆಚರಿಸಿದರು.
ಕಾರ್ಯಕರ್ತರ ವಾಗ್ವಾದ: ಪಟ್ಟಣದ ದಂಡಾಪುರ ಬಡಾವಣೆಯಲ್ಲಿ ಮಾಜಿ ಶಾಸಕ ಸಿ.ಸಿ. ಪಾಟೀಲರ ಮನೆ ಹತ್ತಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವ್ಯಾಚ ಶಬ್ದ ಬಳಸಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮುಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲಿಪಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.