ಮುಂಡರಗಿಗೆ ಒಲಿದ ಶಾಸಕ ಸ್ಥಾನ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 8
ಕ್ಷೇತ್ರ ಮರು ವಿಂಗಡನೆಯಲ್ಲಿ ಮುಂಡರಗಿ ಮತಕ್ಷೇತ್ರ ರದ್ದಾಗಿ, ಅರ್ಧ ಭಾಗ ರೋಣ ಕ್ಷೇತ್ರಕ್ಕೆ, ಇನ್ನರ್ಧ ಭಾಗ ಶಿರಹಟ್ಟಿ ಕ್ಷೇತ್ರಕ್ಕೆ ಹರಿದು ಹಂಚಿಹೋಗಿದ್ದು, ಸ್ಥಳೀಯ ಶಾಸಕರಿಲ್ಲದೇ ಅಭಿವೃದ್ಧಿಗಾಗಿ ಶಿರಹಟ್ಟಿ ಅಥವಾ ರೋಣ ಕ್ಷೇತ್ರದ ಶಾಸಕರನ್ನು ಎದುರು ನೋಡುವಂತಾಗಿತ್ತು. ಆದರೆ, ಈ ಬಾರಿ ಮುಂಡರಗಿಯ ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಡಮನಿ ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಶಾಸಕರಾಗಿ ಆಯ್ಕೆಯಾಗಿದ್ದು ಸ್ಥಳೀಯರಿಗೆ ಸಂತಸ ತಂದಿದೆ.
ಮೂಲತಃ ಮುಂಡರಗಿಯವರೇ ಆದ ಶ್ರಮಿಕ ಹಾಗೂ ದಲಿತ ಕುಟುಂಬದಲ್ಲಿ ಜನಿಸಿದ ರಾಮಕೃಷ್ಣ ದೊಡ್ಡಮನಿ ಸಮಾಜದ ಎಲ್ಲ ವರ್ಗ, ಧರ್ಮ, ಜನಾಂಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. 1976 ರಿಂದ ಕಾಂಗ್ರೆಸ್ನ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ಜಾಗೃತ ಯುವಕ ಮಂಡಳ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ತುಂಗಭದ್ರ ಕೂಲಿ ಕಾರ್ಮಿಕರ ಸಂಘ, ಬಸವ ಬಳಗ, ಕರ್ನಾಟಕ ಜನಪದ ಕಲಾತಂಡ, ಜಗದ್ಗುರು ಅನ್ನದಾನೀಶ್ವರ ಜಾತ್ರಾ ಕಮಿಟಿ, ಜಗದ್ಗುರು ತೋಂಟದಾರ್ಯ ಪ್ರವಚನ ಸಮಿತಿ, ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಡರಗಿ ಅನೇಕ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ್ದ ಇವರು ಜನ ಬೆಂಬಲದಿಂದ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಿದ್ದಾರೆ.
ಪುರಸಭೆಯಿಂದ ವಿಧಾನಸಭೆಗೆ: ಮುಂಡರಗಿ ಪಟ್ಟಣದಲ್ಲಿ ಕಟ್ಟಿಗೆ ವ್ಯಾಪಾರ ಮಾಡುತ್ತಾ ಜನರೊಂದಿಗೆ ಬೆರೆತುಕೊಂಡು ದಲಿತ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ನಾಟಕದಲ್ಲಿ ಅಭಿನಯ ಹೀಗೆ ಅನೇಕ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ನಂತರ ಅದೇ ಜನರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಪುರಸಭೆ ಚುನಾವಣೆಗೆ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾದರು. ಅಲ್ಲಿ ಜನಪರ ಕಾರ್ಯನಿರ್ವಹಿಸಿದರು. ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿ, ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದ ಇವರು ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಡವರಿಗಾಗಿ ಶ್ರಮಿಸುವೆ
ನನ್ನ ಜನಪರ ಕೆಲಸಗಳಿಂದ ಹಾಗೂ ರಾಜ್ಯದ, ಜಿಲ್ಲೆಯ, ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮತದಾರರ ಸಹಕಾರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಡತನ ಕುಟುಂಬದಿಂದ ಬಂದ ನಾನು ನನ್ನ ಅಧಿಕಾರದ ಅವಧಿಯಲ್ಲಿ ಬಡವರ, ಶ್ರಮಿಕರ ಏಳ್ಗೆಗೆ ಶ್ರಮಿಸುತ್ತೇನೆ. ಶಿರಹಟ್ಟಿ ಕ್ಷೇತ್ರದ ಜತಗೆ ಮುಂಡರಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ. ಈ ಗೆಲವು ನನ್ನ ಗೆಲುವಲ್ಲ. ನನ್ನ ಕ್ಷೇತ್ರದ ಎಲ್ಲ ಮತದಾರರ ಗೆಲುವಾಗಿದೆ.
- ರಾಮಕೃಷ್ಣ ದೊಡ್ಡಮನಿ
ಶಾಸಕ, ಶಿರಹಟ್ಟಿ ಮೀಸಲು ಕೇತ್ರ
- ಶರಣು ಸೊಲಗಿ