ಮುದುಡಿದ ಕಮಲ, ಮೇಲು'ಕೈ'
ಕನ್ನಡಪ್ರಭ ವಾರ್ತೆ, ಗದಗ, ಮೇ 8
ಕಳೆದ ಬಾರಿ ತೀವ್ರ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಈ ವಿಧಾನಸಭಾ ಚುನಾವಣೆಯಲ್ಲಿ ಗದಗ ಜಿಲ್ಲೆಯ ಎಲ್ಲನಾಲ್ಕು ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆದಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕಳೆದ ಬಾರಿ ನಾಲ್ಕು ಕ್ಷೇತ್ರಗಳನ್ನೂ ಬಿಜೆಪಿಗೆ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಈ ಸಲ ಮತ್ತೆ ಎಲ್ಲ ಕ್ಷೇತ್ರಗಳನ್ನೂ ಮರಳಿ ಪಡೆಯುವ ಮೂಲಕ ಸೇಡು ತೀರಿಸಿಕೊಂಡಿದೆ. ಕಳೆದ ಬಾರಿ ಬಿಜೆಪಿ ಪರವಾದ ಗಾಳಿ, ಶ್ರೀರಾಮುಲು ಹಾಗೂ ಬಿಎಸ್ವೈ ಪ್ರಭಾವದಿಂದ ಬಿಜೆಪಿ ಗದುಗಿನಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಈಗ ಅವರೆಲ್ಲರೂ ಬಿಜೆಪಿಯಿಂದ ದೂರವಾಗಿದ್ದಾರೆ. ಹಲವಾರು ಅಂಶಗಳು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿ, ಮತದಾರ ಮತ್ತೆ ಕೈ ಹಿಡಿಯುವಂತೆ ಮಾಡಿವೆ.
ಮಾಜಿ ಸಚಿವರ ಸೋಲು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಕಳಕಪ್ಪ ಬಂಡಿ ಕಳೆದ ಎರಡು ಚುನಾವಣೆಯಲ್ಲಿ ಗೆಲವು ದಾಖಲಿಸಿ, ಈ ಸಲ ಹ್ಯಾಟ್ರಿಕ್ ಜಯದ ತವಕದಲ್ಲಿದ್ದರು. ಅವರಿಗೆ ಕಾಂಗ್ರೆಸ್ನ ಜಿ.ಎಸ್. ಪಾಟೀಲ ಬ್ರೇಕ್ ಹಾಕಿದ್ದಾರೆ. ಎರಡು ಸೋಲುಗಳ ಸೇಡು ತೀರಿಸಿಕೊಂಡಿದ್ದಾರೆ. ನರಗುಂದ ಮತಕ್ಷೇತ್ರದಲ್ಲಿ ಮಾಜಿ ಸಚಿವರ ಕಾದಾಟದಲ್ಲಿ ಸಿ.ಸಿ. ಪಾಟೀಲರನ್ನು ಕಾಂಗ್ರೆಸ್ನ ಬಿ.ಆರ್. ಯಾವಗಲ್ ಸೋಲಿಸಿದ್ದಾರೆ. ಅವರೂ ಹಿಂದಿನ ಎರಡೂ ಚುನಾವಣೆಗಳಲ್ಲಿ ಸೋತಿದ್ದರು. 2004, 2008ರ ಎದುರಾಳಿಗಳೇ ಈ ಬಾರಿಯೂ ಕಾದಾಡಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ನಾಯಕರಿಗೆ ಒಲಿದ ಅದೃಷ್ಟ: ಜಿಲ್ಲೆಯ ಪ್ರತಿಷ್ಠಿತ ಕಣಗಳಲ್ಲಿ ಒಂದಾಗಿದ್ದ ಗದಗ ವಿದಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲ ಕಳೆದ ಚುನಾವಣೆಯಲ್ಲಿ ಬಿಜೆಪಿ ಪರವಾದ ಗಾಳಿಯಲ್ಲಿ ಶ್ರೀಶೈಲಪ್ಪ ಬಿದರೂರ ಎದುರು ಕಡಿಮೆ ಅಂತರದಿಂದ ಸೋತಿದ್ದರು. ಈ ಬಾರಿ ನಾಲ್ಕು ಪಟ್ಟು ಹೆಚ್ಚು ಅಂತರದಿಂದ ಜಯ ಗಳಿಸಿದ್ದಾರೆ. ಹಿರಿಯ ರಾಜಕಾರಣಿ, ಮಾಜಿ ಸಚಿವರಾಗಿದ್ದರೂ ವಿಧಾನಸಭೆ ಪ್ರವೇಶ ಎಚ್ಕೆಗೆ ಇದೇ ಮೊದಲು. ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಕೇವಲ 351 ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸುವ ಅದೃಷ್ಟ ಗಳಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು...
ಗದಗ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್.ಕೆ. ಪಾಟೀಲ 70,460 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 33,706 ಮತ. ಅವರ ಸಮೀಪದ ಪ್ರತಿಸ್ಪರ್ಧಿ ಬಿಎಸ್ಸಾರ್ ಕಾಂಗ್ರೆಸ್ನ ಅನಿಲ ಮೆಣಸಿನಕಾಯಿ 36,754 ಮತ ಗಳಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರ 18,814 ಮತ ಪಡೆದು 3ನೇ ಸ್ಥಾನಕ್ಕೆ ಇಳಿದಿದ್ದಾರೆ. ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ನ ಜಿ.ಎಸ್. ಪಾಟೀಲ 74,219 ಮತ ಗಳಿಸಿ ಆಯ್ಕೆಯಾಗಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಕಳಕಪ್ಪ ಬಂಡಿ 56,054 ಮತ ಪಡೆದಿದ್ದು, 18,165 ಮತಗಳ ಭಾರಿ ಅಂತರದಿಂದ ಸೋತಿದ್ದಾರೆ. ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ ಬಿ.ಆರ್. ಯಾವಗಲ್ಲ 59,620 ಮತ ಪಡೆದು ಆಯ್ಕೆಯಾಗಿದ್ದು. ಗುಂಡೇಟು ಪ್ರಕರಣದಲ್ಲಿ ಗಾಯಗೊಂಡಿದ್ದ ಸಿ.ಸಿ. ಪಾಟೀಲ 51,035 ಮತ ಗಳಿಸಿ 8,585 ಅಂತರದಿಂದ ಸೋತಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಮಕೃಷ್ಣ ದೊಡ್ಡಮನಿ 44,572 ಮತ ಪಡೆದು ಆಯ್ಕೆಯಾಗಿದ್ದು, 44,221 ಮತಗಳನ್ನು ಪಡೆದ ರಾಮಣ್ಣ ಲಮಾಣಿ 351 ಮತಗಳ ಅಲ್ಪ ಅಂತರದಿಂದ ಸೋಲನುಭವಿಸಿದ್ದಾರೆ.
ನಿರೀಕ್ಷೆ ಸಾಕಾರಗೊಂಡಿದೆ
ಇದು ಕಾರ್ಯಕರ್ತರ ಗೆಲುವಾಗಿದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸವಿತ್ತು. ಅದೀಗ ಸಾಕಾರಗೊಂಡಿದೆ. ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷಕ್ಕೆ ಕಾರ್ಯಕರ್ತರು ಹಾಗೂ ಜಿಲ್ಲೆಯ ಮತದದಾರು ಹೊಸ ಚೈತನ್ಯವನ್ನು ತುಂಬಿದ್ದಾರೆ. ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ನಡೆಸಿದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದಲ್ಲಿ ಪದೇ ಪದೇ ಗೊಂದಲ ಈ ಎಲ್ಲ ಅಂಶಗಳಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದರು. ಸುಭದ್ರ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜನತೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ.
-ಎಚ್.ಕೆ. ಪಾಟೀಲ, ಗದಗ ಶಾಸಕ
ರೋಣದಲ್ಲಿ ಗೆದ್ದ ಪಕ್ಷವೇ ಆಡಳಿತಕ್ಕೆ
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿತ್ತು. ಆದರೆ, ಈ ಬಾರಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದು, ಕಾಂಗ್ರೆಸ್ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಮತ್ತೆ ತನ್ನ ಪ್ರಾಭಲ್ಯ ಮೆರೆದಿದೆ. ವಿಶೇಷವೆಂದರೆ ಜಿಲ್ಲೆಯ ರೋಣ ಮತಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಆ ಪಕ್ಷದವರೇ ರಾಜ್ಯದಲ್ಲಿಯೂ ಅಧಿಕಾರ ನಡೆಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
- ಶಿವಕುಮಾರ ಕುಷ್ಟಗಿ