ಮಹದಾಯಿ ನದಿ ಜೋಡಣೆಗೆ ಆದ್ಯತೆ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 9
ನರಗುಂದ ಕ್ಷೇತ್ರ ಪೂರ್ಣ ಕೃಷಿ ಅವಲಂಬಿತ ಪ್ರದೇಶವಾಗಿದ್ದರಿಂದ ಈ ಭಾಗದ ರೈತ ಸಮುದಾಯಕ್ಕೆ ತಮ್ಮ ಕೃಷಿಗೆ ಬೇಕಾದ ನೀರು ಮಲಪ್ರಭಾ ಜಲಾಶಯದಿಂದ ಸಿಗತ್ತಿಲ್ಲ. ಕಾರಣ ನನ್ನ ಮುಂದಿನ ಅಧಿಕಾರ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ ಮಹದಾಯಿ ನದಿ ಜೋಡಣೆಗೆ ಆದ್ಯತೆ ಕೊಡುತ್ತೇನೆ ಎಂದು ನೂತನ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಅವರು ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20-30 ವರ್ಷಗಳಿಂದ ಈ ಪ್ರದೇಶದ ಎಲ್ಲ ಜಮೀನುಗಳಿಗೆ ಸಮಯಕ್ಕೆ ಸರಿಯಾಗಿ ಮಳೆಯಾಗದ್ದರಿಂದ ರೈತನ ಬದುಕು ಸಂಕಷ್ಟದಲ್ಲಿದೆ. ಕಾರಣ ನನ್ನ ಮುಂದಿನ ಅಧಿಕಾರ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ ಮಹಾದಾಯಿ ತೀರದ ಬಗ್ಗೆ ನಮ್ಮ ಪಕ್ಷದ ರಾಜ್ಯ ಮತ್ತು ಕೇಂದ್ರದ ನಾಯಕರ ಜತೆ ಚರ್ಚಿಸಿ ಜೋಡಣೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬಾರಿ ಕ್ಷೇತ್ರದ ಜನತೆ ಹಿಂದಿನ ಶಾಸಕರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಗುಂಡಾ ವರ್ತನೆ, ಸಹಿಸಿದೆ ನನ್ನನು ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕನಾಗಿ ಕೆಲಸ ನಿರ್ವಹಿಸುವೆ.
ಈ ಕ್ಷೇತ್ರದ ಮೂಲ ಸೌಲಭ್ಯಗಳಾದ ಕುಡಿವ ನೀರು, ಚರಂಡಿ, ರಸ್ತೆ, ಕೆಳ ಬಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆ, ಬಡವರ, ಅಲ್ಪಸಂಖ್ಯಾತರ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡುವೆ. ಹಿಂದಿನ ಬಿಜೆಪಿ ಶಾಸಕರು ಏನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಜನತೆ ಅರಿತಿದ್ದು, ಈ ಬಾರಿ ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ. ತಾಲೂಕಿನಲ್ಲಿ ಕೆಲವು ಅಧಿಕಾರಿಗಳು ಜನ ಸಾಮಾನ್ಯರೊಂದಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ಅಂತಹ ಅಧಿಕಾರಿಗಳನ್ನು ಬದಲಿಸಲು ಕ್ರಮ ಕೈಗೊಳ್ಳುವೆ. ಕ್ಷೇತ್ರದ ಎಲ್ಲ ಮತದಾರರಿಗೆ ಅಭಿನಂದನೆಗಳು ಹೇಳುತ್ತಾ ವಿಜಯೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಚಂಬಣ್ಣ ವಾಳದ, ಗುರುಪಾದಪ್ಪ ಕುರಹಟ್ಟಿ, ರಾಜು ಕಲಾಲ, ಸಿ.ಬಿ. ಪಾಟೀಲ, ಎಸ್.ಆರ್. ಪಾಟೀಲ, ವಿಠಲ ಶಿಂದೆ, ಎಫ್.ವೈ. ದೊಡಮನಿ, ಎಸ್.ಡಿ. ಕೊಳ್ಳಿ, ಬಿ.ಸಿ. ಬ್ಯಾಳಿ, ಗಿರೀಶ ಪಾಟೀಲ, ದೇಸಾಯಗೌಡ ಪಾಟೀಲ, ಎಸ್.ಎ. ಖಾಜಿ, ಎಂ.ಎ. ಅರಹುಣಸಿ, ಗುರುಶಾಂತ ದೊಡಮನಿ, ತೀರ್ಥಗೌಡ ಪಾಟೀಲ ಮುಂತಾದವರು ಇದ್ದರು.