ಇಂದು ಜಿಲ್ಲಾ ಕಸಾಪ ಕಾರ್ಯಕಾರಣಿ ಸಭೆ
ಗದಗ: ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಕಾರ್ಯಕಾರಣಿ ಸಭೆ ಮೇ 11ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ. ಅದೇ ದಿನ ಕಸಾಪ ಸಂಸ್ಥಾಪನಾ ದಿನಾಚರಣೆ ಹಾಗೂ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಸಂಜೆ 6 ಗಂಟೆಗೆ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆಯಲಿದೆ. ಗದಗ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕೆ.ಬಿ. ತಳಗೇರಿ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಕಾರ್ಯಕಾರಣಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಬೇಕು. ಶನಿವಾರ ಸಾಹಿತ್ಯ ಸಂಜೆ ಹಾಗೂ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು, ಕಸಾಪದ ಅಜೀವ ಸದಸ್ಯರು, ಕನ್ನಡಾಭಿಮಾನಿಗಳು, ಶಾಲಾ-ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡರ ಹಾಗೂ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ಕೋರಿದ್ದಾರೆ.
ಅರ್ಜಿ ಆಹ್ವಾನ
ಗದಗ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 2013-14ನೇ ಸಾಲಿನಲ್ಲಿಯ ಬಿಎ, ಬಿಕಾಂ ಹಾಗೂ ಬಿಎಸ್ಸಿ (ಪಿಸಿಎಂ ಮತ್ತು ಪಿಎಂಸಿಎಸ್) ಕೋರ್ಸ್ಗಳಿಗೆ ಸಂಬಂಧಿಸಿದ ಪ್ರವೇಶಾತಿಯ ಅರ್ಜಿಗಳನ್ನು ಪಾಲಾ ಬದಾಮಿ ರಸ್ತೆ, ಎಬಿಐ ಬ್ಯಾಂಕ್ ಬೆಟಗೇರಿ ಬ್ರ್ಯಾಂಚ್ ಹತ್ತಿರ, ಕುಷ್ಟಗಿಯವರ ಕಟ್ಟಡದಲ್ಲಿರುವ ಕಾರ್ಯಾಲಯದಲ್ಲಿ ಮೇ 15ರಿಂದ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರ ವರೆಗೆ ವಿತರಿಸಲಾಗುವುದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13ರಂದು ಜಗಜ್ಯೋತಿಬಸವೇಶ್ವರರ ಜಯಂತಿ
ಗದಗ: ಜಿಲ್ಲಾ ಆಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಾ ಮಾನವತಾವಾದಿ, ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿ ಮೇ 13ರಂದು ಬೆಳಗ್ಗೆ 11.30ಕ್ಕೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಎಚ್.ಕೆ. ಪಾಟೀಲ್ ಅಧ್ಯಕ್ಷತೆ ವಹಿಸುವರು. ಸಂಸದರು, ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಮಿಸುವರು. ಧಾರವಾಡ ಕಾನೂನು ವಿಶ್ವ ವಿದ್ಯಾಲಯದ ನಿವೃತ್ತ ಉಪಕುಲಪತಿ ಜೆ.ಎಸ್. ಪಾಟೀಲ್ ಉಪನ್ಯಾಸ ನೀಡುವರು. ಕೊಪ್ಪಳದ ಸದಾಶಿವ ಪಾಟೀಲ್ ಮತ್ತು ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಲಿದೆ. ರಾಜೇಶ್ವರಿ ಕಲಾ ಕುಟೀರದವರಿಂದ ವಚನ ನೃತ್ಯ ರೂಪಕ ಜರುಗಲಿದೆ. ಜಿಲ್ಲಾಧಿಕಾರಿ ಎಸ್.ಟಿ. ಅಂಜನ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಸಿಇಓ ವೀರಣ್ಣ ತುರಮರಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.