ಸಿದ್ದು ಅಭಿಮಾನಿಗಳ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ಗದಗ, ಮೇ 10
ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಆಯ್ಕೆಯಾಗಿದ್ದಕ್ಕೆ ಗದುಗಿನ ಗಾಂಧಿ ವೃತ್ತದಲ್ಲಿ ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ನಗರಸಭಾ ಸದಸ್ಯ ಅನಿಲ ಸಿಂಗಟಾಲಕೇರಿ ಮಾತನಾಡಿ, ಸಿದ್ಧರಾಮಯ್ಯನವರು 1983ರಲ್ಲಿಯೇ ಶಾಸಕರಾಗಿ ಆಯ್ಕೆಯಾಗಿ, ಕನ್ನಡ ಗಡಿ ಕಾವಲು ಸಮಿತಿಯ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. 6 ಬಾರಿ ಶಾಸಕರಾಗಿ 3 ಬಾರಿ ಹಣಕಾಸು ಸಚಿವರಾಗಿ ರಾಜ್ಯಕ್ಕೆ ಮಾದರಿಯಾದ ಬಜೆಟ್‌ನ್ನು ನೀಡಿದ್ದಾರೆ. 1998 ಹಾಗೂ 2004ರಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಜನಪರ ಆಡಳಿತ ನೀಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ದೀನ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಕಾರ್ಮಿಕರ, ರೈತರ ಹಾಗೂ ಮಹಿಳೆಯರ ಏಳ್ಗೆಗಾಗಿ ಶ್ರಮಿಸಿದ್ದಾರೆ. ಸಾಮಾಜಿಕ ನ್ಯಾಯ, ನೇರನುಡಿ, ನಿಷ್ಠುರ ವ್ಯಕ್ತಿತ್ವ, ಭ್ರಷ್ಠಾಚಾರ ರಹಿತ ಆಡಳಿತ, ಹಾಗೂ ಸರ್ವಸಮಾಜಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಹನುಮಂತ ಮಲ್ಲಾಪುರ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ರಾಜ್ಯವನ್ನು ಪ್ರಗತಿ ಪಥದತ್ತ ಸಾಗಿಸಲಿದ್ದಾರೆಂದರು.
ಉಮೇಶ ರೊಳ್ಳಿ, ಲಕ್ಷ್ಮಣ ಯಡಿಯಾಪುರ, ಶರಣಬಸವ ಕಾಶಪ್ಪನವರ, ಚಂದ್ರಶೇಖರ ಕುರಿ, ಕುಬೇರಪ್ಪ ಬಂಡಿ, ಚಂದ್ರು ಕೋರಿ, ಗಿರಿಧರಸಿಂಗ್ ಬ್ಯಾಳಿ, ಬಸವರಾಜ ಗುಡಿಸಾಲಿ, ಆಂಜನೇಯ ಕಟಗಿ, ರಮೇಶ ಹೊನ್ನಿ ನಾಯ್ಕರ, ಮಲ್ಲಪ್ಪ ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದರು.