ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡಿ: ಪ್ರಕಾಶ್
ಕನ್ನಡಪ್ರಭ ವಾರ್ತೆ, ಗದಗ, ಮೇ 11
ವಿದ್ಯಾರ್ಥಿಗಳು ಧನಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡುವುದರ ಜತೆಗೆ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹಾವೇರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಪ್ರಾ. ಕೆ.ಬಿ. ಪ್ರಕಾಶ ಹೇಳಿದರು.
ಅವರು ಶನಿವಾರ ತಾಲೂಕಿನ ಹುಲಕೋಟಿ ಗ್ರಾಮದ ಆರ್ಟಿಇ ಸೊಸೈಟಿಯ ರೂರಲ್ ಎಂಜನಿಯರಿಂಗ್ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಇನ್ನೋವಾ-2013 ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸತತ ಪರಿಶ್ರಮ ಅಗತ್ಯ. ಶಿಕ್ಷಣದಿಂದಲೇ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು. ಇಲ್ಲದಿದ್ದರೆ ನೀವು ಕಲಿತ ಶಿಕ್ಷಣ ನಶಿಸಿ ಹೋಗಲಿದೆ. ಅಲ್ಲದೇ ಸಮಾಜದಲ್ಲಿ ನಿಮಗೆ ದೊರೆಯಬೇಕಾದ ಗೌರವ ಸ್ಥಾನ, ಮಾನ ಕಡಿಮೆಯಾಗಲಿದೆ. ಹೀಗಾಗಿ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯಬಾರದು.
ಬೃಹತ್ ನಗರಗಳಲ್ಲಿ ಇರುವ ಎಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದಲ್ಲಿರುವ ಎಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿದ್ದಾರೆ. ವಿದ್ಯಾರ್ಥಿಗಳು ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಆವಿಷ್ಕಾರ ಕಂಡುಕೊಳ್ಳಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಇಂದು ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಅದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ತಾಂತ್ರಿಕ ಶಿಕ್ಷಣ ಎನ್ನುವುದು ಇಂದು ಪ್ರತಿಯೊಬ್ಬರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ದೇಶದ ಎಂಜನಿಯರ್ಗಳನ್ನು ಇಂದು ಜಗತ್ತೇ ವಿಶೇಷ ದೃಷ್ಟಿಕೋನದಿಂದ ನೋಡುತ್ತಿದೆ. ನಮ್ಮ ಪ್ರತಿಭೆಗಳಿಗೆ ಜಗತ್ತಿನಾದ್ಯಂತ ಸಾಕಷ್ಟು ಬೇಡಿಕೆ ಇದೆ. ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ವಿಶ್ವದೆಲ್ಲೆಡೆ ಭಾರತೀಯರ ಸಾಧನೆ ರಾರಾಜಿಸುವಂತಾಗಬೇಕು. ಆ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳು ಗಮನ ನೀಡಬೇಕು. ಇದರೊಟ್ಟಿಗೆ ಕ್ರೀಡೆ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಲ್ಲಿ ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಹಿರಿಯ ಪ್ರಾಧ್ಯಾಪಕ ವಿ.ಎಸ್. ದೋತ್ರದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಾರ್ಯದರ್ಶಿ ಕಲ್ಲೂರಕರ್ ಮುಂತಾದವರು ಉಪಸ್ಥಿತರಿದ್ದರು. ಪ್ರಜ್ಞಾ ಮಲ್ಲಾಪುರ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿ.ಎಂ. ಪಾಟೀಲ ವಾರ್ಷಿಕ ವರದಿ ಮಂಡಿಸಿದರು. ಪ್ರೊ. ಎಸ್.ಎಸ್. ಮನವಾಡೆ ಸ್ವಾಗತಿಸಿದರು. ಸಂತೋಷಕುಮಾರ ಮತ್ತು ಭಾರತಿ ನಿರೂಪಿಸಿದರು.