ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈ ಬಾರಿ 'ಕೈ' ಹಿಡಿದ ಅಹಿಂದ

Vishwanath S
Updated On : 13 May 2013, 11:08 am

ಕನ್ನಡಪ್ರಭ ವಾರ್ತೆ, ಗದಗ, ಮೇ 12
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಯಶಸ್ಸು ಸಾಧಿಸಿದೆ. ಸೋತ ಪಕ್ಷಗಳು ಸೋಲಿನ ಪರಾಮರ್ಶೆಯಲ್ಲಿ ತೊಡಗಿವೆ. ಆದರೆ, ಕಾಂಗ್ರೆಸ್‌ನ ಯಶಸ್ಸನ್ನು ನೋಡಿದಾಗ ಜಿಲ್ಲೆಯ ಅಹಿಂದ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಬೆಂಬಲಿಸಿದ್ದೇ ಗೆಲುವಿಗೆ ಕಾರಣ ಎನ್ನುವುದು ಸ್ಪಷ್ಟವಾಗಿ ಗೋಚರಾವಾಗುತ್ತದೆ.
ಗದಗ ಜಿಲ್ಲೆಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಅವರ ನಂತರ ಸ್ಥಾನದಲ್ಲಿರುವವರೇ ಕುರುಬ ಸಮಾಜದವರು. ಸಿದ್ದರಾಮಯ್ಯ ಈ ಹಿಂದೆ ಜಿಲ್ಲೆಯಾದ್ಯಂತ ಅಹಿಂದ ಸಂಘಟನೆಯನ್ನು ಬಲು ಜೋರಾಗಿಯೇ ಸಂಘಟಿಸಿದ್ದರು. ಜಿಲ್ಲೆಯಲ್ಲಿ ನಡೆದ ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಅಹಿಂದ ಸಂಘಟನೆಯನ್ನು ಬಲ ಪಡಿಸುತ್ತಲೇ ಸಾಗಿದರು. 2008ರ ಚುನಾವಣೆ ವೇಳೆಯಲ್ಲಿಯೂ ಇದರ ಪ್ರಭಾವ ಜೋರಾಗಿಯೇ ಇತ್ತು. ನಂತರ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಅಹಿಂದ ಪಾತ್ರ ಪ್ರಮುಖವಾಗಿತ್ತು. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಸಂಘಟನೆಯ ಎಲ್ಲ ಸಮುದಾಯಗಳು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಗಿದೆ ಎನ್ನುವ ಅಭಿಪ್ರಾಯ ಕಾಂಗ್ರೆಸ್ ಪಕ್ಷದಿಂದಲೇ ಕೇಳಿ ಬರುತ್ತಿದೆ.
ಸಿದ್ದರಾಮಯ್ಯ ಶ್ರಮ ಪ್ರಮುಖ: ಗದಗ ಜಿಲ್ಲೆಯಲ್ಲಿ ಅಹಿಂದ ಮತಗಳ ಸಂಖ್ಯೆ ಗಣನೀಯವಾಗಿರುವುದನ್ನು ಮೊದಲಿನಿಂದಲೂ ಗಮನಿಸಿದ್ದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಿದ್ದಾಗ, ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆಯಲ್ಲಿ ಹಾಗೂ ಮುಖ್ಯವಾಗಿ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ 4 ಕ್ಷೇತ್ರಗಳಲ್ಲಿನ ಅಹಿಂದ ಮುಂಖಂಡರಲ್ಲಿ ಮುಖ್ಯವಾಗಿ ಒಗ್ಗಟ್ಟು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಹಲವಾರು ವರ್ಷಗಳ ಹಿಂದೆ ಮಾಡಿದ್ದ ಈ ಸಂಘಟನೆ, ಪ್ರಸಕ್ತ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ರೂಪದಲ್ಲಿ ವರವಾಗಿ ಬಂದಿತು. ಎಲ್ಲ ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ ಮತಗಳನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಜಿಲ್ಲೆಯ ಸಿದ್ದರಾಮಯ್ಯನವರ ಅನುಯಾಯಿಗಳು ಹಗಲಿರುಳು ಎನ್ನದೆ ಶ್ರಮಿಸಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತ ಪೂರ್ವ ಗೆಲವು ಸಾಧಿಸಲು ಕಾರಣವಾಯಿತು.
ಪ್ರಚಾರದಲ್ಲಿಯೂ ಜಾಗೃತಿ: ಸಿದ್ದರಾಮಯ್ಯ ಗದಗ ಜಿಲ್ಲೆಯ 4 ವಿಧಾನಸಭಾ ಮತ ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿಯೇ ಬಹಿರಂಗ ಸಭೆಗಳನ್ನು ಏರ್ಪಡಿಸುವ ಮೂಲಕ ಆಯಾ ಕ್ಷೇತ್ರದ ಅಹಿಂದ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರು ಪ್ರಚಾರಕ್ಕೆ ತೆರಳಿದಲೆಲ್ಲ ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಎಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕು ಎಂದು ವಿನಂತಿಸುತ್ತಿದ್ದರು. ಇದು ಮತದಾರರ ಮೇಲೆ ಎಷ್ಟೊಂದು ಪ್ರಭಾವ ಬೀರಿತು ಎಂದರೆ, ಮೊದಲೇ ನಿರ್ಧರಿತವಾದ ರೀತಿಯಲ್ಲಿ ಸಿದ್ದರಾಮಯ್ಯನವರ ಅಹಿಂದ ಸಂಘಟನೆಯ ಎಲ್ಲ ಮತಗಳು ಕಾಂಗ್ರೆಸ್‌ಗೆ ಲಭ್ಯವಾದವು. ಸುಭದ್ರ ಮತ್ತು ಭ್ರಷ್ಟಾಚಾರ ಮುಕ್ತ ಎನ್ನುವ ಘೋಷಣೆಯಿಂದ ಪ್ರಭಾವಿತರಾದ ಹಲವಾರು ಲಿಂಗಾಯತರು ಸಿದ್ದರಾಮಯ್ಯನವರನ್ನು ಬೆಂಬಲಿಸಿದ್ದೇ ಜಿಲ್ಲೆಯ 4 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎನ್ನುವುದನ್ನು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಸಿದ್ದರಾಮಯ್ಯ ಈ ಹಿಂದೆ ಜಿಲ್ಲೆಯಾದ್ಯಂತ ಅಹಿಂದ ಸಂಘಟನೆಯನ್ನು ಬಲು ಜೋರಾಗಿಯೇ ಸಂಘಟಿಸಿದ್ದರು. ಪ್ರತಿ ಚುನಾವಣೆಯಲ್ಲಿಯೂ ಅಹಿಂದ ಸಂಘಟನೆಯನ್ನು ಬಲಪಡಿಸುತ್ತಲೇ ಸಾಗಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಸಂಘಟನೆಯ ಎಲ್ಲ ಸಮುದಾಯಗಳು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಗಿದೆ ಎನ್ನುವ ಅಭಿಪ್ರಾಯ ಆ ಪಕ್ಷದಿಂದಲೇ ಕೇಳಿ ಬರುತ್ತಿದೆ.
ಬಿಜೆಪಿ ವಿರೋಧಿ ಅಲೆಯಲ್ಲಿ ಕಾಂಗ್ರೆಸ್‌ಗೆ ಲಾಭ
ಜಿಲ್ಲೆಯಲ್ಲಿ ಕಳೆದ 9 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಶಾಸಕರ ವರ್ತನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಬೇಸರ ಉಂಟಾಗಿತ್ತು. ಕಳೆದ 5 ವರ್ಷದಲ್ಲಿ ಬಿಜೆಪಿ ರಾಜ್ಯ ನಾಯಕರು ನಡೆದುಕೊಂಡ ರೀತಿ, ಪಕ್ಷದಲ್ಲಿ ಪದೇ ಪದೇ ಉಂಟಾಗುತ್ತಿದ್ದ ಗೊಂದಲ ಹೀಗೆ ಬಿಜೆಪಿಯ ಬಗ್ಗೆ ಜಿಲ್ಲೆಯ ಜನತೆಯ ಮನಸ್ಸಿನಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಬಿಜೆಪಿ ಬಗೆಗಿನ ಬೇಸರ, ಕಾಂಗ್ರೆಸ್ ಪರ ಗಾಳಿ, ಸಿದ್ದರಾಮಯ್ಯನವರ ಅಹಿಂದದ ಪ್ರಭಾವ ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು, 4 ಸ್ಥಾನಗಳಲ್ಲಿಯೂ ಬಿಜೆಪಿ ಸೋಲು ಕಾಣುವಂತಾಯಿತು.

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement