ಗಂಜೀ ಬಸವೇಶ್ವರ ದೇವಸ್ಥಾನ ಪವಿತ್ರ ಸ್ಥಳ
ಗದಗ: ನಗರದ ಗಂಜೀ ಬಸವೇಶ್ವರ ರಥೋತ್ಸವವು ಪುರಾಣ, ಇತಿಹಾಸದಿಂದ ಕೂಡಿದೆ. ಈ ದೇವಸ್ಥಾನದ ಮಹತ್ವ ಬಹಳ ಪವಿತ್ರವಾದುದು. ಈ ಭಾಗದ ರೈತಾಪಿ ಕುಟುಂಬದ ಜನರಿಗೆ ಮಳೆ ಬೆಳೆ ಚೆನ್ನಾಗಿ ಆಗಿ ರೈತರ ಬಾಳು ಹಸನಾಗಲಿ ಎಂದು ಗದಗ ಜಿಲ್ಲಾ ಕೆಜೆಪಿ ಅಧ್ಯಕ್ಷ ರಾಜು ಕುರಡಗಿ ಹೇಳಿದರು.
ಈಚೆಗೆ ಅವರು ನಗರದ ಉಸುಗಿನಕಟ್ಟೆಯ ಗಂಜೀ ಬಸವೇಶ್ವರ ರಥೋತ್ಸವದ ಧ್ವಜಾರೋಹಣವನ್ನು ನೆರೆವೇರಿಸಿ ಮಾತನಾಡಿದರು. ಜಾತ್ರೆಗಳು ಕನ್ನಡ ನಾಡು, ಇತಿಹಾಸದ ಪ್ರತೀಕ. ಹಬ್ಬ ಹರಿದಿನಗಳು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಪ್ರತಿಯೊಂದು ಜಾತ್ರೆ ಮತ್ತು ಹಬ್ಬ ಹರಿದಿನಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಠ ಕಲ್ಪನೆಯ ಜತೆಗೆ ಅವುಗಳಿಗೆ ಭಾವನೆಗಳು ಇವೆ. ಅವುಗಳನ್ನು ತಿಳಿದುಕೊಂಡು ಅವುಗಳ ಪಾಲನೆಗೆ ನಾವು ಮುಂದಾಗಬೇಕಾಗಿದೆ. ಅಂತಹ ಮಹತ್ವದ ಕಲ್ಪನೆಯುಳ್ಳ ಈ ಜಾತ್ರೆಯು ಸಹ ತನ್ನದೇ ಆದ ವೈಶಿಷ್ಠ್ಯ ಹೊಂದಿದೆ ಎಂದರು.
ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಮಾತನಾಡಿ, ನಗರದ 21ನೇ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ನಾನು ಸದಾ ಬದ್ಧ. ಇಲ್ಲಿನ ಜನರ ಅಗತ್ಯ ಮೂಲಭೂತ ಸೌಕರ್ಯಗಳನ್ನು ವಾರ್ಡಿನ ಎಲ್ಲರಿಗೂ ತಲುಪುವಂತೆ ನಾನು ಪ್ರಾಮಾಣಿಕ ಸೇವೆ ಸಲ್ಲಿಸುವೆ. ಅದಕ್ಕೆ ವಾರ್ಡಿನ ಎಲ್ಲ ಜನರ ಸಹಾಯ ಸಹಕಾರ ಅಗತ್ಯ. ಇದಕ್ಕಾಗಿ ನಾನು ಹಿರಿಯರ ಮತ್ತು ಕಿರಿಯರ ಮಾರ್ಗದರ್ಶನ ಕೋರುತ್ತೇನೆ ಎಂದರು.
ನಗರಸಭೆಯ ಮಾಜಿ ಸದಸ್ಯ ನಿಂಗಪ್ಪ ಪಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಳವಪ್ಪ ಹೊಂಬಳ, ಬಾಬಣ್ಣ ಶಾಬಾದಿಮಠ, ಗುರುಶಾಂತಗೌಡ ಮರಿಗೌಡ್ರ, ವಸಂತ ಪಡಗದ, ಉಮೇಶ ಮುಳ್ಳಾಳ, ಪ್ರಭು ಕಲಬಂಡಿ, ಸಿದ್ದಲಿಂಗನಗೌಡ ಉಮಚಗಿ, ಮಾರ್ತಾಂಡಪ್ಪ ಹಾದಿಮನಿ, ಪರಪ್ಪ ಕಮ್ಮಾರ, ಈರಣ್ಣ ಮರಿಗೌಡ್ರ, ರೇವಯ್ಯ ಹಿರೇಮಠ, ಬಸಯ್ಯ ಹಿರೇಮಠ, ಮುಂತಾದವರು ಉಪಸ್ಥಿತರಿದ್ದರು.